ಹಿಂದೂವಾಗಿ ಜೀಸಸ್,ಅಲ್ಲಾಹ್ ರನ್ನು ದೇವರೆಂದು ಒಪ್ಪಿಕೊಳ್ಳಬಹುದು: ಸಿ.ಟಿ.ರವಿ

ಚಿಕ್ಕಮಗಳೂರು: ಹಿಂದೂವಾಗಿ ಜೀಸಸ್,ಅಲ್ಲಾಹ್ ಇಬ್ಬರನ್ನೂ ದೇವರೆಂದು ಒಪ್ಪಿಕೊಳ್ಳಬಹುದು. ಅಲ್ಲಾಹನನ್ನೂ ದೇವರನ್ನಾಗಿ ಒಪ್ಪಿಕೊಳ್ಳಬಹುದು. ಯಾಕೆಂದರೆ ನಮ್ಮಲ್ಲಿ ಬಹುದೇವತಾರಾಧನೆ ಇದೆ. ದೇವನೊಬ್ಬ, ನಾಮ ಹಲವು ಎನ್ನುವ ತತ್ವ ನಮ್ಮೊಳಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಚರ್ಚಿಗೆ ಹೋಗುವುದನ್ನು ಅಥವ ಮಸೀದಿಗೆ ಹೋಗುವುದನ್ನೂ ನಾವು ಒಪ್ಪಿಕೊಳ್ಳಬಹುದು. ಆದರೆ ಇದು ಹಿಂದೂವಾಗಿದ್ದರೆ ಮಾತ್ರ ಸಾಧ್ಯವಿದೆ. ಇಸ್ಲಾಂ ಅದ ತಕ್ಷಣ ಅವನಿಗೆ ಮಸೀದಿಗೆ ಹೊರತುಪಡಿಸಿ, ದೇವಸ್ಥಾನಕ್ಕೆ ಬಾಗಿಲುಗಳು ಬಂದ್ ಆಗಿಬಿಡುತ್ತವೆ ಎಂದರು.
ಉಳಿದ ದೇವರುಗಳ ಅಸ್ತಿತ್ವದ ಬಗ್ಗೆ ಅವರದು ನಿರಾಕರಣೆಯಿದೆ. ಹಾಗೆಯೇ ಕ್ರಿಶ್ಚಿಯಾನಿಟಿಗೆ ಹೋದ ತಕ್ಷಣ ಉಳಿದ ದೇವರ ಅಸ್ತಿತ್ವದ ಬಗ್ಗೆ ನಿರಾಕರಣೆಯಿದೆ. ಈ ವಿಷಯದಲ್ಲಿ ಎರಡೂ ಧರ್ಮಗಳು ಆಲೋಚನೆ ಮಾಡಿದರೆ, ಬಹುಶಃ ಯಾರು ಇವತ್ತು ಬಹುತ್ವದ ಬಗ್ಗೆ ಮಾತಾಡುತ್ತಾರೆ, ದೇವನೊಬ್ಬ ನಾಮ ಹಲವು ಎಷ್ಟು ಮತಿ ಇದೆಯೋ ಅಷ್ಟು ಮತವೆನ್ನುವ ಮುಕ್ತತೆಗೆ ಅವಕಾಶ ಸಿಗುತ್ತದೆ ಎಂದು ಹೇಳಿದರು.
ಕೆಲವರು ಬಹಳ ವಿಷಯದಲ್ಲಿ ಮುಕ್ತತೆಯ ಪ್ರತಿಪಾದನೆ ಮಾಡುವಂತಹವರು ಕೂಡ ಈ ವಿಷಯದಲ್ಲಿ ಮೌನವಾಗಿದ್ದಾರೆ. ಎರಡೂ ಧರ್ಮಗಳ ಧಾರ್ಮಿಕ ನೇತಾರರು ಚಿಂತಿಸಬೇಕು ಎಂದು ಅಭಿಪ್ರಾಯಪಟ್ಟರು.
ಅಲ್ಲಾಹನೂ ದೇವರು, ಈಶ್ವರನೂ ದೇವರು ಎಂದು ಒಪ್ಪಿಕೊಂಡರೆ ಬಹುಶಃ ಸಂಘರ್ಷ ಜಗತ್ತಿನಲ್ಲಿ ಇರೋದಿಲ್ಲ. ಜೀಸಸ್ಸೂ ದೇವರು, ಕೃಷ್ಣನೂ ದೇವರು ಎಂದು ಒಪ್ಪಿಕೊಂಡರೆ ಜಗತ್ತಿನಲ್ಲಿ ಸಂಘರ್ಷ ಇರೋದಿಲ್ಲ. ಹೀಗಾಗಿ ಎಲ್ಲಿ ಯಾರ್ಯಾರು ಜಗತ್ತಿನಲ್ಲಿ ಶಾಂತಿ ನೆಲೆಸಲು ಇರುವ ಅಡೆತಡೆಗಳನ್ನು ನಿವಾರಿಸಲು ಸಾಧ್ಯಯಿದೆ ಆ ನಿಟ್ಟಿನಲ್ಲಿ ಆಲೋಚನೆ ಮಾಡಿದರೆ ಜಗತ್ತು ಸುಖವಾಗಿರುತ್ತದೆ ಎಂದು ನುಡಿದರು.



