ವಿಧಾನ ಪರಿಷತ್ ಚುನಾವಣೆ: ಗ್ರಾ.ಪಂ. ಸದಸ್ಯರಿಗೆ ಫುಲ್ ಡಿಮ್ಯಾಂಡ್!

ರಾಜೇಶ್ ಕೊಂಡಾಪುರ
ರಾಮನಗರ: ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಿರುವ ಪ್ರಮುಖ ಮೂರು ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಗೆಲ್ಲಲು ತಂತ್ರ ರೂಪಿಸುತ್ತಿದ್ದು, ಗ್ರಾಮ ಪಂಚಾಯಿತಿ ಸದಸ್ಯರಿಗೆ ಡಿಮ್ಯಾಂಡ್ ಜೋರಾಗಿದೆ. ಮರು ಆಯ್ಕೆ ಬಯಸಿರುವ ಕಾಂಗ್ರೆಸ್ ಅಭ್ಯರ್ಥಿ ಎಸ್ .ರವಿ ಅವರಿಗೆ ಟಕ್ಕರ್ ನೀಡಲು ಜೆಡಿಎಸ್ ನಿಂದ ಎಚ್ .ಎಂ. ರಮೇಶ್ ಗೌಡ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಬಿ.ಸಿ.ನಾರಾಯಣಸ್ವಾಮಿ ಅಖಾಡ ಪ್ರವೇಶಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಭದ್ರಕೋಟೆಯಾಗಿರುವ ಕಾರಣ ಉಭಯ ಪಕ್ಷಗಳ ನಡುವೆ ನೇರ ಹಣಾಹಣಿ ಇದ್ದರೂ, ಆಡಳಿತರೂಢ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ನಿರ್ಲಕ್ಷಿಸುವಂತಿಲ್ಲ. ಈಗ ಮೂರು ಪಕ್ಷಗಳ ಅಭ್ಯರ್ಥಿಗಳು ಸಭೆ ಸಮಾರಂಭಗಳ ಮೂಲಕ ಮತದಾರರ ಮನವೊಲಿಸುವ ಕಾರ್ಯ ಆರಂಭಿಸಿದ್ದಾರೆ. ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳಾದ ಜಿಪಂ, ತಾಪಂ, ಗ್ರಾಪಂ, ನಗರಸಭೆ ಹಾಗೂ ಪುರಸಭೆಗಳ ಚುನಾಯಿತ ಜನಪ್ರತಿನಿಗಳು ಮತದಾರರಾಗಿದ್ದಾರೆ.
ಇವರಲ್ಲಿ ಎಷ್ಟು ಮಂದಿ ಅರ್ಹ ಮತದಾರರಿದ್ದಾರೆ ಎನ್ನುವುದು ಚುನಾವಣಾ ಆಯೋಗದಿಂದ ಪಟ್ಟಿ ಪ್ರಕಟವಾದ ನಂತರವಷ್ಟೇ ಸ್ಪಷ್ಟವಾಗಲಿದೆ. ಆದರೀಗ ಗ್ರಾಮ ಪಂಚಾಯಿತಿಗಳ ಸದಸ್ಯರು ಅತಿ ದೊಡ್ಡ ಸಂಖ್ಯೆಯಲ್ಲಿ ಇರುವುದರಿಂದ ಅವರ ಮನವೊಲಿಕೆಗೆ ರಾಜಕೀಯ ಪಕ್ಷಗಳು ತಂತ್ರ ರೂಪಿಸುತ್ತಿವೆ.
ಪಕ್ಷದ ಚಿಹ್ನೆ ಇಲ್ಲದೇ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯರು ಯಾರಿಗೆ ಬೇಕಾದರೂ ಮತದಾನ ಮಾಡಲು ಸ್ವತಂತ್ರರು. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ಇರುವ ಗ್ರಾಪಂ ಸದಸ್ಯರಿಗೆ ಡಿಮ್ಯಾಂಡ್ ಜೋರಾಗಿದೆ. ಚುನಾವಣಾ ವೆಚ್ಚದ ಬಗ್ಗೆಯೂ ಗಂಭೀರ ಚರ್ಚೆಗಳು ನಡೆಯುತ್ತಿವೆ. ಗ್ರಾಪಂ ಸದಸ್ಯರು ಯಾವುದೇ ಪಕ್ಷದಿಂದ ಆಯ್ಕೆ ಆಗಿರುವುದಿಲ್ಲ. ಆದರೆ, ಒಂದೊಂದು ಪಕ್ಷದ ಬೆಂಬಲಿತರಾಗಿರುತ್ತಾರೆ. ಅಥವಾ ಒಲವುಳ್ಳವರಾಗಿರುತ್ತಾರೆ. ಅವರು ಯಾರಿಗೆ ಆಶೀರ್ವಾದ ಮಾಡುತ್ತಾರೆ ಎನ್ನುವುದರ ಮೇಲೆ ಅಭ್ಯರ್ಥಿಗಳು ಮತ್ತು ಪಕ್ಷದ ಭವಿಷ್ಯ ನಿರ್ಧಾರವಾಗುತ್ತದೆ.
ಅಭ್ಯರ್ಥಿಗಳಿಗೆ ಬಂಡವಾಳದ ಚಿಂತೆ:
ಲಭ್ಯ ಅಂಕಿ ಅಂಶದ ಪ್ರಕಾರ ಅಂದಾಜು 3928, ಮತದಾರರು ಇದ್ದಾರೆ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಬಿಡದಿ ಪುರಸಭೆಗೆ ಚುನಾವಣೆ ನಡೆದಿಲ್ಲ. ಹೀಗಾಗಿ ಆ ಮತದಾರರು ಇಲ್ಲ. ಹೀಗಾಗಿ ಮತದಾರರ ಸಂಖ್ಯೆಯು 250 ರಿಂದ 300 ಸದಸ್ಯರು ಸಂಖ್ಯೆ ಕಡಿಮೆಯಾಗಿದೆ. ಅತಿ ದೊಡ್ಡ ಸಂಖ್ಯೆಯಲ್ಲಿರುವ ಗ್ರಾಮ ಪಂಚಾಯಿತಿಗಳ ಸದಸ್ಯರ ಮನವೊಲಿಕೆಯತ್ತ ರಾಜಕೀಯ ಪಕ್ಷದವರ ಚಿತ್ತ ನೆಟ್ಟಿದೆ.
ಮತ ಚಲಾವಣೆಗೆ ಹಲವರು ನಿರ್ದಿಷ್ಟ ಮೊತ್ತದ ಕಾಣಿಕೆ ಕೇಳಲು ಸ್ಥಳೀಯ ಮುಖಂಡರ ಮುಂದೆ ಪ್ರಸ್ತಾಪಿಸಿದ್ದಾರೆ. ಹೀಗಾಗಿ ಸದಸ್ಯರ ಡಿಮ್ಯಾಂಡ್ ಕಳೆದ ಚುನಾವಣೆಗಿಂತ ಹೆಚ್ಚಾಗುವ ಆತಂಕ ಅಭ್ಯರ್ಥಿಗಳಲ್ಲಿ ಮೂಡಿದೆ. ಜತೆಗ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಸದಸ್ಯರು ಇಲ್ಲದಿರುವುದು ಸ್ವಲ್ಪಮಟ್ಟಿನ ನೆಮ್ಮದಿ ತರಿಸಿದೆ. ಕಳೆದ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿದಿತ್ತು. ಇದೀಗ ಆರು ವರ್ಷಗಳ ಅಂತರದಲ್ಲಿ ರಾಜಕೀಯ ಸ್ಥಿತಿಗತಿ ಹಾಗೂ ಮತದಾರನ ಮನಸ್ಥಿತಿ ಬದಲಾಗಿದೆ. ಈಗ ಹಣವಿಲ್ಲದೆ ಯಾವುದೇ ಚುನಾವಣೆ ಮಾಡಲಾಗದು ಎನ್ನುವ ಪರಿಸ್ಥಿತಿಯಿದೆ. ಪರಿಣಾಮ ಅಭ್ಯರ್ಥಿಗಳಿಗೆ ಬಂಡವಾಳದ ಚಿಂತೆಯೂ ಕಾಡುತ್ತಿದೆ.
ರಾಮನಗರ ಜಿಲ್ಲೆಯಲ್ಲಿ ಹೆಚ್ಚು ಮತದಾರರು:
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಹೋಲಿಕೆ ಮಾಡಿದಲ್ಲಿ ರಾಮನಗರ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಮತದಾರರು ಇದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ 102 ಸ್ಥಳೀಯ ಸಂಸ್ಥೆಗಳಿಂದ 1866 ಇದ್ದರೆ, ರಾಮನಗರ ಜಿಲ್ಲೆಯಲ್ಲಿ 126 ಸ್ಥಳೀಯ ಸಂಸ್ಥೆಗಳಿಂದ 2062 ಮತದಾರರು ಸೇರಿ ಒಟ್ಟು 3928 ಜನರು ಮತದಾನದ ಹಕ್ಕು ಹೊಂದಿದ್ದಾರೆ.
ಅಧಿಕಾರದ ಅವಧಿ ಮುಗಿದಿದ್ದ ಗ್ರಾಮ ಪಂಚಾಯಿತಿಗಳಿಗೆ ಕಳೆದ ವರ್ಷ ಡಿಸೆಂಬರ್ ನಲ್ಲಿ ಚುನಾವಣೆ ನಡೆದಿತ್ತು. ಆಗ ನಮ್ಮ ಬೆಂಬಲಿತರು ಇಷ್ಟು ಸಂಖ್ಯೆಯಲ್ಲಿ ಗೆದ್ದಿದ್ದಾರೆ ಎಂದು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಾಯಕರು ಘೋಷಿಸಿದ್ದರು. ಈಗ ಸ್ಥಳೀಯ ಸಂಸ್ಥೆಯಿಂದಲೇ ಮೇಲ್ಮನೆಗೆ ಹಣಾಹಣಿ ನಡೆಯುತ್ತಿದ್ದು, ಯಾವ ಪಕ್ಷಕ್ಕೆ ಬೆಂಬಲ ಎಷ್ಟಿದೆ ಎನ್ನುವುದು ಕೂಡ ಗೊತ್ತಾಗಲಿದೆ.



