ಉತ್ತರ ಕನ್ನಡಜಿಲ್ಲಾ ಸುದ್ದಿ

ಪತ್ರಕರ್ತ ಅರ್ಜುನ್ ಮಲ್ಯ ಹಲ್ಲೆ ಪ್ರಕರಣ : ಸರಕಾರಿ ಆಡಳಿತ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್ ವಿರುದ್ಧ ದೂರು ದಾಖಲು

ಕಾರವಾರ : ಪತ್ರಕರ್ತ ಅರ್ಜುನ್ ಮಲ್ಯ ಅವರ ಮೇಲೆ ನಡೆದ ಮಾರಣಾಂತಿಕ ಹಲ್ಲೆಗೆ ಸಂಬಂಧಿಸಿದಂತೆ ಗುರುವಾರ ರಾತ್ರಿ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಇಲ್ಲಿನ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್ ವಿರುದ್ಧ ಇನ್ನೊಂದು ದೂರು ದಾಖಲಾಗಿದೆ.

ಕಳೆದ ನವೆಂಬರ್ 18 ರಂದು ಸಂಜೆ 6 ಗಂಟೆಯ ವೇಳೆಗೆ ನಾನು (ಅರ್ಜುನ್ ಮಲ್ಯ) ಅವರು ತಮ್ಮ ದೈನಂದಿನ ಕೆಲಸ ಪೂರೈಸಿ ಬೈಕಿನ ಮೇಲೆ ಬೆಳಕೆಯ ತಮ್ಮ ಮನೆಗೆ ಹೋಗುತ್ತಿರುವಾಗ 6 ಜನ ದುಷ್ಕರ್ಮಿಗಳ ಗುಂಪೊಂದು ಕೊಲೆ ಮಾಡುವ ಉದ್ದೇಶದಿಂದ ತಲೆ ಮತ್ತು ಕೈ ಕಾಲಿನ ಮೇಲೆ ಕಬ್ಬಿಣದ ಸರಳು ಹಾಗೂ ಕಟ್ಟಿಗೆಯ ರೀಪಿನಿಂದ ಹಲ್ಲೆ ನಡೆಸಿ, ಕೈ ಮುರಿದಿರುತ್ತಾರೆ. ತಲೆಗೆ ಹೆಲ್ಮೇಟ್ ಧರಿಸಿರುವುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದೇನೆ. ಕೈ ಮೂಳೆ ಮೂರು ತುಂಡಾದ ಕಾರಣಕ್ಕೆ ನಾನೀಗ ಕುಂದಾಪುರದ ಚಿನ್ಮಯಿ ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದೇನೆ. ಘಟನೆಯ ನಂತರ ತೀವ್ರ ಆಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವುದರಿಂದ ದೂರು ನೀಡಲು ವಿಳಂಬವಾಗಿದೆ. ನಾನು ಆಸ್ಪತ್ರೆಯಲ್ಲಿರುವುದರಿಂದ ಈ ದೂರನ್ನು ನನ್ನ ತಂದೆ ಮತ್ತು ತಾಯಿ ಭಟ್ಕಳ ಉಪನಿರೀಕ್ಷಕರಿಗೆ ನೀಡಿರುವುದಾಗಿ ಅರ್ಜುನ್ ಮಲ್ಯ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಬೆಳಕೆಯ ರಿಕ್ರಿಯೇಷನ್ ಕ್ಲಬ್ ನ ಮಾಲಿಕರಾದ ಮಾದೇವ ನಾಯ್ಕನ ಜೊತೆಯಲ್ಲಿ ಇತರ ಕೆಲವು ವ್ಯಕ್ತಿಗಳು ತೆರೆಮರೆಯಲ್ಲಿ ಈ ಆರೋಪಿಗಳ ಜೊತೆ ಕೈಜೋಡಿಸಿದ್ದಾರೆ. ಈಗಾಗಲೇ ಮಾದೇವ ನಾಯ್ಕರನ್ನು ಪೊಲೀಸರು ಬಂಧಿಸಿದ್ದರೂ ಈ ಕೊಲೆಯ ಸಂಚಿನ ಪ್ರಮುಖ ರೂವಾರಿಯಾದ ಭಟ್ಕಳ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್, ಕಾರು ಚಾಲಕ ಚಂದ್ರು ನಾಯ್ಕ ಶಿರಾಲಿ ಹಾಗೂ ದತ್ತು ನಾಯ್ಕ ಮತ್ತು ಇನ್ನಿತರರ ಕೈವಾಡವಿರುತ್ತದೆ. ನನ್ನ ಮೇಲೆ ಹಲ್ಲೆ ಮಾಡಿದ ಪ್ರಮುಖ ಆರೋಪಿಯನ್ನು ಅದೇ ದಿನ ಮಧ್ಯಾಹ್ನ 3 ಗಂಟೆಗೆ ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಕಾಯಿಲೆ ಎಂದು ಸಂಚು ರೂಪಿಸಿ ಆರೋಪಿ ಮಾದೇವ ನಾಯ್ಕನನ್ನು ಒಳರೋಗಿಯಾಗಿ ದಾಖಲು ಮಾಡಿಕೊಂಡು ರಕ್ಷಣೆ ಮಾಡಲು ಯತ್ನಿಸಿದ್ದಾರೆ. ಡಾ.ಸವಿತಾ ಕಾಮತರ ನೆರವಿನಿಂದ ಈ ಆರೋಪಿ ಆಸ್ಪತ್ರೆಯಲ್ಲಿ ದಾಖಲುಗೊಂಡು ಕೆಲವು ಗಂಟೆಗಳ ನಂತರ ಈತ ಯಾರಿಗೂ ಹೇಳದೇ ಕೇಳದೆ ಆಸ್ಪತ್ರೆಯಿಂದ ಹೊರಗಡೆ ರೌಡಿಗಳೊಂದಿಗೆ ಸೇರಿ ನನ್ನ ಮೇಲೆ ಕೊಲೆ ಮಾಡಲು ಯತ್ನ ನಡೆಸಿದ್ದಾನೆಂದು ದೂರಿನಲ್ಲಿ ವಿವರಿಸಿದ್ದಾರೆ.

ಕಳೆದ ಜೂನ್,21 ರಂದು ಲಾಕ್ ಡೌನ್ ಸಮಯದಲ್ಲಿ ಡಾ.ಸವಿತಾ ಕಾಮತ್ ಅವರು ಸರಕಾರಿ ಆಸ್ಪತ್ರೆಯಲ್ಲಿಯೇ ತಮ್ಮ ಹಟ್ಟುಹಬ್ಬವನ್ನು ಆಚರಿಸಿಕೊಂಡು ಕೋವಿಡ್ ನಿಯಮವನ್ನು ಮುರಿದಿದ್ದರು. ಅದನ್ನು ನನ್ನ ವೆಬ್ ಚಾನೆಲ್ಲನಲ್ಲಿ ಸುದ್ದಿ ಮಾಡಿದ ಕಾರಣಕ್ಕಾಗಿ ನನ್ನ ಮೇಲೆ ಹಗೆತನ ಸಾಧಿಸಿ ಶ್ರೀಕಾಂತ ನಾಯ್ಕ ಹಾಗೂ ಆತನ ಸಂಗಡಿಗರ ಗುಂಪಿಗೆ ಹಣ ಕೊಟ್ಟು ನನ್ನ ಮೇಲೆ ಹಲ್ಲೆ ನಡೆಸಿ,ನನ್ನ ಕೊಲೆ ಯತ್ನಕ್ಕೆ ಪ್ರಯತ್ನಿಸಿದ್ದರು. ನಾನು ಈ ಸಂಬಂಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದು ಇರುತ್ತದೆ. ದೂರಿನಲ್ಲಿ ನನ್ನ ಜೀವಕ್ಕೆ ಅಪಾಯವಾದರೆ ಡಾ.ಸವಿತಾ ಕಾಮತ್ ಕಾರಣ ಎಂದು ದೂರು ನೀಡಿದ್ದೇನೆ. ಹಾಗೆ ಭಟ್ಕಳ ಹಾಲಿ ಶಾಸಕ ಸುನೀಲ್ ನಾಯ್ಕ ಅವರ ವಿರುದ್ದ ನಾನು ವಾಸ್ತವವನ್ನು ಸಾರ್ವಜನಿಕರೆದುರು ಇಡುವ ಸಂಬಂಧ ಕೆಲವು ಸುದ್ದಿ ಮಾಡಿದ್ದೇನೆ. ಈ ಕಾರಣಕ್ಕೆ ಶಾಸಕರ ಕಾರು ಚಾಲಕ ಚಂದ್ರು ನಾಯ್ಕ ಎಂಬುವವರು ನನ್ನ ಮೇಲೆ ದ್ವೇಷದಿಂದ ನನ್ನ ಪೇಸ್ ಬುಕ್ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ. ನನ್ನ ಮೇಲಿರುವ ದ್ವೇಷದಿಂದ ನನ್ನನ್ನು ಮುಗಿಸಿ ಬಿಡುತ್ತೇನೆ ಎಂದು ಸಾರ್ವಜನಿಕರೆದುರು ಹೇಳಿಕೊಂಡಿದ್ದು ಇರುತ್ತದೆ. ಶಾಸಕರ ಬೆಂಬಲಿಗ ಹಾಗೂ ಗೊರಟೆಯ ರಿಕ್ರಿಯೇಷನ್ ಕ್ಲಬ್ ನ ಮಾದೇವ ನಾಯ್ಕನ ಕ್ಲಬ್ ನಲ್ಲಿ ಕೆಲಸ ಮಾಡುವ ದತ್ತು ನಾಯ್ಕ ಇವರೂ ನನ್ನ ಕೊಲೆ ಯತ್ನದಲ್ಲಿ ಭಾಗಿಯಾಗಿದ್ದಾರೆಂದು ನಾನು ಲಿಖಿತ ಹೇಳಿಕೆ ನೀಡುತ್ತಿದ್ದೇನೆ ಎಂದು ಅರ್ಜುನ್ ಮಲ್ಯ ಅವರು ಭಟ್ಕಳ ಉಪನಿರೀಕ್ಷಕರಿಗೆ ನೀಡಿದ ದೂರಿನಲ್ಲಿ ವಿವರಿಸಿ, ಇವರೆಲ್ಲರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸುವಂತೆ ವಿನಂತಿಸಿಕೊಂಡಿದ್ದಾರೆ.

ಯಥಾ ನಕಲನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಕಾರವಾರ, ಜಿಲ್ಲಾಧಿಕಾರಿಗಳು, ಕಾರವಾರ, ಬಿ.ನಾರಾಯಣ,ರಾಜ್ಯಾದ್ಯಕ್ಷರು,ಕರ್ನಾಟಕ ಜರ್ನಲಿಸ್ಟ್ ಯೂನಿಯನ್, ಬೆಂಗಳೂರು. ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿಗಳು, ವಿಧಾನಸೌಧ, ಬೆಂಗಳೂರು, ಅರಗ ಜ್ಞಾನೇಂದ್ರ, ಗೃಹ ಸಚಿವರು, ವಿಧಾನಸೌಧ, ಬೆಂಗಳೂರು ಹಾಗೂ ಶಿವರಾಮ್ ಹೆಬ್ಬಾರ್, ಜಿಲ್ಲಾ ಉಸ್ತುವಾರಿ ಸಚಿವರು, ಯಲ್ಲಾಪುರ ಅವರಿಗೆ ರವಾನಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button