ಜಂಟಿ ಕೃಷಿ ಅಧಿಕಾರಿ ಮನೆಯಲ್ಲಿ ಅಕ್ರಮ ಸಂಪತ್ತು ಪತ್ತೆ: 8 ಕೆಜಿ ಚಿನ್ನ, ಜಮೀನು ಸೇರಿದಂತೆ ಹಲವು ದಾಖಲೆಗಳ ವಶ

ದಾವಣಗೆರೆ: ಚನ್ನಗಿರಿ ತಾಲೂಕಿನ ತಣಿಗೆರೆ ಜಂಟಿ ಕೃಷಿ ಅಧಿಕಾರಿಯ ಶಿವಮೊಗ್ಗ ಮನೆಯಲ್ಲಿ ಭಾರಿ ಸಂಪತ್ತು ಪತ್ತೆಯಾಗಿದೆ. 1.5 ಕೆಜಿ ಚಿನ್ನಾಭರಣ, 8 ಕೆಜಿ ಚಿನ್ನದ ಬಿಸ್ಕತ್ ಸಿಕ್ಕಿದೆ. ಎಸಿಬಿ ಅಧಿಕಾರಿಗಳು ನಿನ್ನೆಯೇ ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.
ಎಸಿಬಿ ದಾಳಿಗೆ ಒಳಗಾಗಿರುವ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತಣಿಗೆರೆ ಗ್ರಾಮದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ ಎಸ್ ರುದ್ರೇಶಪ್ಪನ ಶಿವಮೊಗ್ಗ ನಿವಾಸ ಮಾತ್ರವಲ್ಲ, ತಣಿಗೆರಿಯಲ್ಲೂ ಕೆಲ ದಾಖಲೆಗಳು ಸಿಕ್ಕಿವೆ.
ಶಿವಮೊಗ್ಗ ಚಾಲುಕ್ಯ ನಗರದ ನಿವಾಸದಲ್ಲೂ ಎಸಿಬಿ ಅಧಿಕಾರಿಗಳು ತಪಾಸಣೆ ನಡೆಸಿದ್ದು, ಎಂಟು ಕೆ.ಜಿ.ಬಂಗಾರದ ಚಿನ್ನದ ಬಿಸ್ಕೆಟ್ ಪತ್ತೆಯಾಗಿವೆ. ಅಲ್ಲದೇ, ಒಂದೂವರೆ ಕೆಜಿ ಬಂಗಾರದ ಆಭರಣಗಳು, ಮೂರು ಕೆಜಿಗೂ ಹೆಚ್ಚು ಬೆಳ್ಳಿ ವಸ್ತುಗಳು ಮತ್ತು ಇದಲ್ಲದೆ 15 ಲಕ್ಷ ಹಣ ಪತ್ತೆಯಾಗಿವೆ. ಅಲ್ಲದೇ, ಟಿ ಎಸ್ ರುದ್ರೇಶಪ್ಪನ ಮನೆಯಲ್ಲಿ ನಾಟಾ ಕೂಡ ಸಿಕ್ಕಿದ್ದು, ರುದ್ರೇಶಪ್ಪ ತನ್ನ ಮನೆಯಲ್ಲೇ ನಾಟ ಸಂಗ್ರಹ ಮಾಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.
ಹೀಗಾಗಿ ಅರಣ್ಯ ಅಧಿಕಾರಿಗಳು ಆಗಮಿಸಿ ತಪಾಸಣೆ ನಡೆಸಿದ್ದಾರೆ. ಇದು ಅಕ್ರಮ ನಾಟವೋ ಇಲ್ಲವೇ ಪರವಾನಗಿ ಪಡೆದು ಖರೀದಿ ಮಾಡಿದ್ದಾರೆಯೇ ಎಂದು ತಪಾಸಣೆ ನಡೆಸಲಾಗುತ್ತಿದೆ. ಇಷ್ಟೆ ಅಲ್ಲದೇ, ವಿವಿಧ ಆಸ್ತಿಗಳ ದಾಖಲೆಯೂ ಪತ್ತೆಯಾಗಿದ್ದು, ಎಸಿಬಿ ಅಧಿಕಾರಿಗಳು ಪರಿಶೀಲನೆ ಆರಂಭಿಸಿದ್ದಾರೆ. ಇನ್ನು, ಚನ್ನಗಿರಿ ತಾಲೂಕಿನಲ್ಲಿ ಎಂಟು ಎಕರೆ ಭೂಮಿ ಹೊಂದಿರುವ ಮಾಹಿತಿಯೂ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿದ್ದು ಪರಿಶೀಲನೆಯನ್ನ ನಡೆಸಿದ್ದಾರೆ.



