ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ಐವರ ವಿರುದ್ದ ದೂರು ದಾಖಲು

ಧಾರವಾಡ : ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ಐವರ ವಿರುದ್ಧ ಧಾರವಾಡ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸರ್ವೋದಯ ಶಿಕ್ಷಣ ಸಂಸ್ಥೆಯ ಚೇರ್ಮನ್ ವಿವಾದ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಇದೀಗ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರ ಮೇಲೆ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಧಾರವಾಡ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದೆ.
ವೆಂಕಟೇಶ ಲಮಾಣಿ, ಚೈತ್ರಾ ಮೇಟಿ, ನಿರ್ಮಲಾ ಚವ್ಹಾಣ, ದೊಡ್ಡಪ್ಪ ಕೆಂಗಣ್ಣವರ, ಬಸವರಾಜ ಹೊರಟ್ಟಿ ಈ ಐವರ ಮೇಲೆ ದೂರು ದಾಖಲಾಗಿದೆ.
ಕಳೆದ ಜನವರಿ 22 ರಂದು ಹುಬ್ಬಳ್ಳಿಯಲ್ಲಿ ವಾಲ್ಮೀಕಿ ಮಹಾಸಭಾದ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿ, ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಸರ್ವೋದಯ ಟ್ರಸ್ಟ್ ಗೆ ಯಾವುದೇ ಸಂಬಂಧವಿಲ್ಲ, ಆದರೂ ನಾವೇ ಅಧ್ಯಕ್ಷರು ಎಂಬ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ರಾಜಕೀಯ ಅಧಿಕಾರ ದುರ್ಬಳಕೆ ಮಾಡಿಕೊಂಡು ಚೇರ್ಮನ್ ಗಿರಿ ಮಾಡುತ್ತಿದ್ದಾರೆ. ಅಲ್ಲದೇ ಸರ್ವೋದಯ ಶಿಕ್ಷಣ ಸಂಸ್ಥೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳ ತುಂಬಲು ಜಾಹಿರಾತು ನೀಡಿದ್ದಾರೆ. ಅವರು ಅಧಿಕೃತವಾಗಿ ಚೇರ್ಮನ್ ಆಗಿದ್ದರೇ ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ಒತ್ತಾಯ ಮಾಡಿದ್ದಾರೆ.

ಅದರಂತೆ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಸದಸ್ಯರು ಧಾರವಾಡದಲ್ಲಿರುವ ಶಾಲೆಗಳಿಗೆ ಪರಿಶೀಲನೆಗೆಂದು ಭೇಟಿ ನೀಡಿದಾಗ ಮುಗದ ಗ್ರಾಮದಲ್ಲಿ ಬಸವರಾಜ ಹೊರಟ್ಟಿ ಅವರ ಬೆಂಬಲಿಗರು ಮಹಾಸಭಾದ ಸದಸ್ಯರ ಮೇಲೆ ಹಲ್ಲೇ ಮಾಡಿದ್ದಾರೆ. ಅಲ್ಲದೇ ಜಾತಿ ನಿಂದನೆ ಜೊತೆಗೆ ಒಂದು ಕಾರು ಜಖಂಗೊಳಿಸಿದ್ದಾರೆಂದು ಆರೋಪಿಸಿ ಮೋಹನ ಗುಡಸಲಮನಿ ಎಂಬುವರು ಬಸವರಾಜ ಹೊರಟ್ಟಿ ಸೇರಿದಂತೆ 5 ಜನರ ಮೇಲೆ ದೂರು ದಾಖಲು ಮಾಡಿದ್ದಾರೆ.
ಈ ಕುರಿತು ಮೋಹನ ಗುಡಸಲಮನಿ ಮಾಧ್ಯಮಗಳ ಜೊತೆಗೆ ಮಾತನಾಡಿದ್ದು, ನಾವು ಸರ್ವೋದಯ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದಾಗ ಅಲ್ಲಿನ ಸಿಬ್ಬಂದಿ ( ಹೊರಟ್ಟಿ ಅವರ ಬೆಂಬಲಿಗರು) ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ನಮ್ಮ ವಾಹನದ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಭರತ ಎಂಬುವರು ಮಾತನಾಡಿ, ನಾನೇ ಟ್ರಸ್ಟ್ ನ ಜಿಪಿ ಹೊಲ್ಡರ್ ಇದ್ದೇನಿ. ಬಸವರಾಜ ಹೊರಟ್ಟಿ ಅವರು ಮೊನ್ನೆಯಷ್ಟೇ ಮಾಧ್ಯಮದವರೊಂದಿಗೆ ಮಾತನಾಡಿ ನಾನು 1998 ರಿಂದ ಟ್ರಸ್ಟ್ ನ ಅಧ್ಯಕ್ಷನಾಗಿದ್ದೇನೆ ಅಂತ ಹೇಳಿದ್ದಾರೆ. ಆದ್ರೆ 2003 ರಲ್ಲಿ ಉಳ್ಳಾಗಡ್ಡಿ ಎಂಬುವರು ಬಿಟ್ಟು ಕೊಟ್ಟಿದ್ದಾರೆ ಎಂದು ಆರೋಪಿಸಿದರು. ಜೊತೆಗೆ ನಮ್ಮ ಮೇಲೆ ಮಾನ್ಯ ಬಸವರಾಜ ಹೊರಟ್ಟಿ ಅವರ ಬೆಂಬಲಿಗರೆ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಈ ಕುರಿತಂತೆ ದೂರು ಹಾಗೂ ಪ್ರತಿ ದೂರು ಧಾರವಾಡ ಗ್ರಾಮೀಣ ಪೋಲಿಸ ಠಾಣೆಯಲ್ಲಿ ದಾಖಲಾಗಿದ್ದು, ಮುಂದೆ ಈ ಪ್ರಕರಣ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.
