ದಾವಣಗೆರೆ : ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ, ಮಗು ಬಲಿ

ದಾವಣಗೆರೆ : ವೈದ್ಯರ ನಿರ್ಲಕ್ಷ್ಯದಿಂದಾಗಿ ತಾಯಿ, ಮಗು ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಮಲ್ಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಸಾವಿತ್ರಿ (32), ಆಕೆಯ ಮಗು ಸಾವು ಕಂಡಿದ್ದಾರೆ. ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆಯೇ ಆಸ್ಪತ್ರೆ ಸಿಬ್ಬಂದಿಯೊಂದಿಗೆ ಸಂಬಂಧಿಕರು ವಾಗ್ವಾದ ನಡೆಸಿದ್ದಾರೆ. ಹೆರಿಗೆಗೆ ಅಂತ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಹಿಳೆಯನ್ನು ಕರೆದುಕೊಂಡು ಬರಲಾಗಿತ್ತು. ಮಧ್ಯಾಹ್ನ 1 ಗಂಟೆಗೆ ಬಂದ ಮಹಿಳೆಗೆ ಸಾಯಂಕಾಲ ಚಿಕಿತ್ಸೆ ನೀಡಲಾಗಿದೆ. ಈ ವೇಳೆ ಮಹಿಳೆಗೆ ನರ್ಸ್ ಹೆರಿಗೆ ಮಾಡಿಸಲು ಮುಂದಾಗಿದ್ದರು ಎನ್ನಲಾಗಿದೆ.
ಮಹಿಳೆಯ ಗರ್ಭಚೀಲ ಹರಿದು ಮಗು ಹಾಗೂ ತಾಯಿಗೆ ತೊಂದರೆ ಆಗಿದೆ. ಬಳಿಕ ದಾವಣಗೆರೆ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ನರ್ಸ್ ಹೇಳಿದ್ದು, ಜಿಲ್ಲಾಸ್ಪತ್ರೆಯಲ್ಲೂ ಕುಂಟು ನೆಪ ಹೇಳಿ ಎಸ್. ಎಸ್. ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚನೆ ನೀಡಲಾಗಿದೆ. ಅಲ್ಲಿಯೂ ಚಿಕಿತ್ಸೆ ಫಲಿಸದೇ ತಾಯಿ, ಮಗು ಸಾವು ಕಂಡಿದ್ದಾರೆ ಎಂದು ಮೃತಳ ಪೋಷಕರು, ಸಂಬಂಧಿಕರು ಆರೋಪಿಸಿದ್ದಾರೆ.ಗ್ರಾಮದಲ್ಲಿ ಶವಸಂಸ್ಕಾರ ಮಾಡದೆ ತಾಯಿ-ಮಗು ಶವವಿಟ್ಟು ಸಂಬಂಧಿಕರ ಪ್ರತಿಭಟನೆ ನಡೆಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಬಳಿಕ ಭರವಸೆ ನೀಡಿದ ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಗಿದೆ.



