ಇಂದು ನೇತಾಜಿ ಜನ್ಮ ದಿನ, ಸಂಜೆ ಇಂಡಿಯಾ ಗೇಟ್‌ನಲ್ಲಿ ಪ್ರಧಾನಿಯಿಂದ ಪ್ರತಿಮೆ ಅನಾವರಣ

ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ರ ಜನ್ಮದಿನ. ಈ ದಿನವನ್ನು ಪರಾಕ್ರಮ್ ದಿವಸ್ ಎಂದು ಆಚರಿಸಲಾಗುತ್ತಿದೆ. ಜನ್ಮ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ನವದೆಹಲಿಯ ಇಂಡಿಯಾ ಗೇಟ್‌ನಲ್ಲಿ ನೇತಾಜಿಯವರ ಹೊಲೊಗ್ರಾಮ್ ಪ್ರತಿಮೆಯನ್ನು ಸಂಜೆ ಅನಾವರಣಗೊಳಿಸಲಿದ್ದಾರೆ. ಮಹಾನ್ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನಾಚರಣೆಯ ಸ್ಮರಣಾರ್ಥ ಮತ್ತು ಈ ಕಾರ್ಯಕ್ರಮದ ಗುರುತಾಗಿ ವರ್ಷಪೂರ್ತಿ ಆಚರಣೆಗಳ ಅಂಗವಾಗಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಭವ್ಯ ಪ್ರತಿಮೆಯನ್ನು ಇಂಡಿಯಾ ಗೇಟ್‌ನಲ್ಲಿ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ.
ದೆಹಲಿ ಗ್ರಾನೈಟ್‌ನಿಂದ ನಿರ್ಮಿಸಲಾದ ಈ ಪ್ರತಿಮೆಯು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ನೇತಾಜಿ ಸಲ್ಲಿಸಿದ ಕೊಡುಗೆಯ ಗೌರವ ಸಂಕೇತವಾಗಿದೆ. ಹೊಸ ಪ್ರತಿಮೆ ಪೂರ್ಣವಾಗುವವರೆಗೆ ಸದ್ಯ ಹೊಲೊಗ್ರಾಮ್ ಪ್ರತಿಮೆ ಇರಲಿದೆ. ಇದೆ ಸಂದರ್ಭದಲ್ಲಿ 2019, 2020, 2021 ಮತ್ತು 2022 ರ ಸುಭಾಶ್ ಚಂದ್ರ ಬೋಸ್ ಆಪ್ತ ಪ್ರಬಂಧನ್ ಪುರಸ್ಕಾರಗಳನ್ನು ಪ್ರದಾನ ಕಾರ್ಯಕ್ರಮ ನಡೆಯಲಿದೆ.
ವಿಪತ್ತು ನಿರ್ವಹಣೆ ಕ್ಷೇತ್ರದಲ್ಲಿ ವ್ಯಕ್ತಿಗಳು ಮತ್ತು ಸಂಸ್ಥೆಗಳು ಸಲ್ಲಿಸಿದ ನಿಸ್ವಾರ್ಥ ಸೇವೆ ಗುರುತಿಸಿ ಗೌರವಿಸುವ ಉದ್ದೇಶದಿಂದ ಕೇಂದ್ರ ವಾರ್ಷಿಕ ಸುಭಾಶ್ ಪುರಸ್ಕಾರ ಸ್ಥಾಪಿಸಿದೆ.ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮ ದಿನಾಚರಣೆಯನ್ನು ಪ್ರತಿ ವರ್ಷ ಪರಾಕ್ರಮ್ ದಿವಸ್ ಎಂಬ ಘೋಷಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಈ ನಿಟ್ಟಿನಲ್ಲಿ ಕೈಗೊಳ್ಳಲಾಗಿದೆ. ಇದರ ಅಂಗವಾಗಿ ಗಣರಾಜ್ಯೋತ್ಸವ ಆಚರಣೆಗಳು ಒಂದು ದಿನ ಮುಂಚಿತವಾಗಿಯೇ ಪ್ರಾರಂಭವಾಗಲಿದೆ.
ಈ ನಡುವೆ, ನೇತಾಜಿ ಜನ್ಮ ದಿನದ ಅಂಗವಾಗಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರ ನಿರ್ಮಾಣಕ್ಕಾಗಿ ಅಪ್ರತಿಮ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಕೊಡುಗೆಯನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ದೇಶವನ್ನು ದಾಸ್ಯದ ಸಂಕೋಲೆಯಿಂದ ಬಿಡಿಸುವಲ್ಲಿ ಬೋಸ್ ಪಾತ್ರ ಅನನ್ಯ ಎಂದೂ ಬಣ್ಣಿಸಿದ್ದಾರೆ.
