Breaking NewsLatestಜಿಲ್ಲಾ ಸುದ್ದಿರಾಮನಗರ

ಪಾದಯಾತ್ರೆ ಹತ್ತಿಕ್ಕಲು ಬಿಜೆಪಿ ಮತ್ತು ಸರ್ಕಾರದ ಯತ್ನ: ಡಿ ಕೆ ಶಿವಕುಮಾರ್ ಆರೋಪ

ರಾಮನಗರ: ನಿಮಗೆ ನನ್ನನ್ನು ನೋಡಿದರೆ ಕೊರೊನಾ ಲಕ್ಷಣಗಳು ಇದೆ ಅಂತ ಅನ್ನಿಸುತ್ತದೆಯೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾಧ್ಯಮದ ಪ್ರತಿನಿಧಿಗಳನ್ನು ಪ್ರಶ್ನಿಸಿದರು. ನನಗೆ ಕೊರೊನಾ ಟೆಸ್ಟ್ ಮಾಡಿ ಪಾಸಿಟಿವ್ ಅಂತ ಹೇಳಿಸಿ ಪಾದಯಾತ್ರೆ ಹತ್ತಿಕ್ಕಬೇಕೆಂದು ಬಿಜೆಪಿ ತಿಳಿದುಕೊಂಡಿದೆ. ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಲ್ಲ ಎಂದು ಘೋಷಿಸಿದರು.

ಎರಡನೇ ದಿನದ ಪಾದಯಾತ್ರೆಗೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಡಿ.ಕೆ. ಶಿವಕುಮಾರ್, ರಾತ್ರಿ ಕೋವಿಡ್ ಟೆಸ್ಟ್ ಮಾಡಿ ಅಂತ ಜಿಲ್ಲಾಡಳಿತ ಅಧಿಕಾರಿಗಳನ್ನು ನನ್ನ ಬಳಿಗೆ ಕಳಿಸಿಕೊಟ್ಟಿದ್ದರು. ಪಾಪ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ನನ್ನ ಹತ್ತಿರ ಹತ್ತು ಜನರ ವೈದ್ಯರ ತಂಡ ಇದೆ ಅಂತ ಗೊತ್ತಿಲ್ಲ. ನನ್ನನ್ನು ನೋಡಿದರೆ ಕೊರೊನಾ ಲಕ್ಷಣಗಳು ಇದೆ ಎಂದು ನಿಮಗನಿಸುತ್ತದೆಯೇ? ಭಾನುವಾರದ ಪಾದಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿದ್ದೇನೆ ಎಲ್ಲೂ ಕೂಡ ಸುಸ್ತಾಗಿಲ್ಲ. ನನಗೆ ಕೊರೊನಾ ಟೆಸ್ಟ್ ಮಾಡಿ ಪಾಸಿಟಿವ್ ಅಂತ ಹೇಳಿದರೆ, ಯಾತ್ರೆ ಹತ್ತಿಕ್ಕಬಹುದು ಅಂತ ಅವರು ತಿಳಿದಿದ್ದಾರೆ ಎಂದು ಜಿಲ್ಲಾಡಳಿತ ಮತ್ತು ಸರಕಾರದ ವಿರುದ್ದ ಆಕ್ರೋಶ ಹೊರ ಹಾಕಿದರು.

ಸಿಎಂ ಅಕ್ಕ-ಪಕ್ಕ ಕೂತವರಿಗೆ ಪಾಸಿಟಿವ್ ಬಂದಿದೆ. ಆದರೆ ಮುಖ್ಯಮಂತ್ರಿಗೆ ಅವರಿಗೆ ಯಾಕೆ ಟೆಸ್ಟ್ ಮಾಡಿಲ್ಲ. ಅವರಿಗೆ ಯಾವುದೇ ಲಕ್ಷಣಗಳು ಇಲ್ವಾ? ಇದೇ ಬಿಜೆಪಿ ಅವರು ರಾಜಕೀಯಕ್ಕಾಗಿ ಮಾಡುತ್ತಿರುವ ಡ್ರಾಮ. ನಿನ್ನೆ ಕರ್ಫ್ಯೂ ನೆಪದಲ್ಲಿ, ನಮ್ಮ ಕಾರ್ಯಕರ್ತರ ಬಸ್​ಗಳನ್ನು ಹಿಡಿದಿದ್ದರು. ಇಂದು ಕರ್ಫ್ಯೂ ಇಲ್ಲ. ಪಾದಯಾತ್ರೆಗೆ ಅಪಾರ ಸಂಖ್ಯೆಯಲ್ಲಿ ಜನ ಬರುತ್ತಾರೆ ಎಂದರು.

ರಾಜ್ಯದಲ್ಲಿ ಕರ್ಫ್ಯೂ ಮಾಡುವುದರಿಂದ ಸಾಮಾನ್ಯ ಜನತೆ ಕಷ್ಟಪಡುವ ಸ್ಥಿತಿ ನಿರ್ಮಾಣವಾಗಿದೆ. ಈ ಕರ್ಫ್ಯೂವನ್ನು ತೆಗೆದು ಹಾಕಲೇ ಬೇಕು. ವಿಮಾನ ನಿಲ್ದಾಣದಲ್ಲಿ ದಂಧೆ ಮಾಡಲಾಗುತ್ತಿದೆ. ಇಬ್ಬರು ವಿದೇಶದಿಂದ ಬಂದರೇ ಒಬ್ಬರಿಗೆ ಪಾಸಿಟಿವ್ ತೋರಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಕೊರೊನಾ ಹೆಸರಲ್ಲಿ ದುಡ್ಡು ಹೊಡೆದಿದ್ದು ಸಾಕು. ಕಳೆದ ವರ್ಷ ಬೆಡ್ ಹಾಕಿದರೂ ಯಾರು ಮಲಗಲಿಲ್ಲ. ಆ ದುಡ್ಡು ಎಲ್ಲಿ ಹೋಯ್ತು ಎಂದು ಪ್ರಶ್ನಿಸಿದರು.

ನನ್ನ ಕಾಂಗ್ರೆಸ್ನವರು ರೇಪ್ ಮಾಡುತ್ತಿದ್ದಾರೆ ಎಂದು ಆರಗ ಜ್ಞಾನೇಂದ್ರ ಅವರು ನೀಡಿದ್ದ ಹೇಳಿಕೆಗೆ, ಈಗ ಕ್ಷಮೆ ಕೇಳಿ ಅಂತ ಹೇಳುತ್ತಿದ್ದಾರೆ. ಆತ ಅಜ್ಞಾನೇಂದ್ರ. ಬಿಜೆಪಿ ಅವರು ನನ್ನನ್ನ ನೆನಪು ಮಾಡಿಕೊಳ್ಳದೇ ಇದ್ದರೇ ನಿದ್ದೆಯೇ ಬರಲ್ಲ ಅಂತ ಕಾಣುತ್ತೇ? ನಾನು ಕುಳಿತರಲಿ ನಿಂತಿರಲಿ ಅವರು ಟ್ರೋಲ್ ಮಾಡುತ್ತಾರೆ. ಅವರು ಮಾಡುವ ಟ್ರೋಲ್ ಮಾಡಿಕೊಳ್ಳಲಿ ಅದಕ್ಕೆ ನಾನು ತಲೆಕೆಡಿಸಿಕೊಳ್ಳಲ್ಲ. ಈ ಪಾದಯಾತ್ರೆ 10 ದಿನವೂ ಸುಸುತ್ರವಾಗಿ ನಡೆದೇ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button