ಟ್ರ್ಯಾಕ್ಟರ್ ಮೇಲೆ ಸುವರ್ಣಸೌಧ ಪ್ರವೇಶಿಸಿ ಧರಣಿ ನಡೆಸಿದ ಕಾಂಗ್ರೆಸ್

ಬೆಳಗಾವಿ : ಸರ್ಕಾರದ ವಿರುದ್ಧ ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದ ಕಾಂಗ್ರೆಸ್ ಮುಖಂಡರು ಹೈಡ್ರಾಮಾದ ನಡುವೆ ಟ್ರ್ಯಾಕ್ಟರ್ ಮೇಲೆ ಸುವರ್ಣ ವಿಧಾನಸೌಧ ಆವರಣ ಪ್ರವೇಶಿಸಿ ಧರಣಿ ನಡೆಸಿದ ಪ್ರಸಂಗ ಗುರುವಾರ ನಡೆಯಿತು.
ಟ್ರ್ಯಾಕ್ಟರ್ ಮೂಲಕ ಸುವರ್ಣಸೌಧ ಪ್ರವೇಶಿಸಲು ಕಾಂಗ್ರೆಸ್ ಶಾಸಕರು ಮತ್ತು ಮುಖಂಡರು ಮುಂದಾದಾಗ ಪೊಲೀಸರು ಅವರನ್ನು ದ್ವಾರದಲ್ಲೇ ತಡೆದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಏರ್ಪಟ್ಟಿತು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು, ಪೊಲೀಸರ ಮಧ್ಯೆ ವಾಗ್ವಾದವೂ ನಡೆಯಿತು.
ಪೊಲೀಸರ ಕ್ರಮವನ್ನು ಖಂಡಿಸಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬ್ಯಾರಿಕೇಡ್ ನೂಕಿ ನುಗ್ಗಲು ಯತ್ನಿಸಿದರು. ಈ ವೇಳೆ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ನಾವು ಮುಖ್ಯಮಂತ್ರಿಯನ್ನು ಕೇಳಿ ಪ್ರತಿಭಟನಾ ಮಾಡಬೇಕಾ? ಪ್ರತಿಭಟನೆ ಮಾಡುವುದು ನಮ್ಮ ಹಕ್ಕು ಎಂದರು.
ನಾವು ಟ್ರ್ಯಾಕ್ಟರ್ ನಲ್ಲಿ ಹೋಗುತ್ತೇವೆಯೋ ಬೇರೆ ವಾಹನದಲ್ಲಿ ಹೋಗುತ್ತೇವೆಯೋ ಇವರಾರು ಕೇಳುವುದಕ್ಕೆ ? ತಡೆಯುವುದಕ್ಕೆ ? ವಿಧಾನಮಂಡಲ ಪ್ರವೇಶಿಸಲು ಜನತೆ ನಮಗೆ ಪಾಸ್ ಕೊಟ್ಟಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಪಕ್ಷಗಳನ್ನು ಹೊರಗಿಟ್ಟು ವಿಧೇಯಕಗಳನ್ನು ಅಂಗೀಕರಿಸಲು ಹಾಗೂ ತಮ್ಮ ಭ್ರಷ್ಟಾಚಾರವನ್ನು ಮುಚ್ಚಿಟ್ಟುಕೊಳ್ಳಲು ಸರ್ಕಾರ ಹುನ್ನಾರ ನಡೆಸಿದೆ. ಪ್ರತಿಪಕ್ಷದ ಸದಸ್ಯರು ಬಂದರೆ ಸರ್ಕಾರದ ಭ್ರಷ್ಟಾಚಾರ ಬಯಲಿಗೆ ಬರುತ್ತದೆ. ಇದರಿಂದ ಹೆದೆರಿರುವ ಸರ್ಕಾರ ನಮ್ಮನ್ನು ತಡೆಯುತ್ತಿದೆ ಎಂದೂ ಅವರು ಆರೋಪಿಸಿದರು.
ಈ ಹೈಡ್ರಾಮದ ನಡುವೆ ಪ್ರತಿಭಟನಾಕಾರರಿಗೆ ಮಣಿದ ಸರ್ಕಾರ ಟ್ರ್ಯಾಕ್ಟರ್ ನಲ್ಲಿ ವಿಧಾನಸೌಧ ಆವರಣ ಪ್ರವೇಶಿಸಲು ಅವಕಾಶ ಕಲ್ಪಿಸಿತು. ಸುವರ್ಣಸೌಧದ ಪಶ್ಚಿಮ ದ್ವಾರದ ಬಳಿ ಧರಣಿ ಆರಂಭಿಸಿದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಭ್ರಷ್ಟ ಬಿಜೆಪಿಗೆ ಧಿಕ್ಕಾರ ಎಂದು ಘೋಷಣೆ ಕೂಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸತೀಶ್ ಜಾರಕಿಹೊಳಿ ಗೈರು !
ಇದಕ್ಕೂ ಮುನ್ನ ನಗರದಲ್ಲಿ ನಡೆದ ಕಾಂಗ್ರೆಸ್ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮೇಲ್ಮನೆ ವಿರೋಧ ಪಕ್ಷದ ನಾಯಕ ಎಸ್.ಆರ್ ಪಾಟೀಲ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಮುಖಂಡರಾದ ಹೆಚ್.ಕೆ ಪಾಟೀಲ್, ಸಲೀಂ ಅಹ್ಮದ್ , ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕೆ.ಜೆ ಜಾರ್ಜ್, ಪ್ರಿಯಾಂಕ್ ಖರ್ಗೆ, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು. ಆದರೆ ತವರು ಜಿಲ್ಲೆಯಲ್ಲಿಯೇ ಧರಣಿ ನಡೆಯುತ್ತಿದ್ದರೂ ಸತೀಶ್ ಜಾರಕಿಹೊಳಿ ಮಾತ್ರ ಗೈರಾಗಿದ್ದರು



