ಭೂ ಕಬಳಿಕೆ ಆರೋಪ : ಸಚಿವ ಭೈರತಿ ಬಸವರಾಜ್ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯ

ಬೆಳಗಾವಿ: ಸರಿಸುಮಾರು ನಾನೂರು ಕೋಟಿ ರೂಪಾಯಿ ಭೂಮಿಯನ್ನು ಕಬಳಿಸಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಗುರುವಾರ ಕೂಡ ಮೇಲ್ಮನೆಯಲ್ಲಿ ಪ್ರತಿಭಟನೆ ಮುಂದುವರಿಸಲು ತೀರ್ಮಾನಿಸಿದ್ದಾರೆ.
ಬುಧವಾರ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದಕ್ಕಾಗಿ ಕಾಂಗ್ರೆಸ್ ಮುಖ್ಯಸಚೇತಕ ನಾರಾಯಣ ಸ್ವಾಮಿ, ಹಿರಿಯ ಸದಸ್ಯರಾದ ಸಿ.ಎಂ.ಇಬ್ರಾಹಿಂ, ಬಿ.ಕೆ.ಹರಿಪ್ರಸಾದ್ ಸೇರಿದಂತೆ 14 ಮಂದಿ ಕಾಂಗ್ರೆಸ್ ಸದಸ್ಯರನ್ನು ಸಭಾಪತಿ ಬಸವರಾಜ ಬೊಮ್ಮಾಯಿ ಒಂದು ದಿನದ ಮಟ್ಟಿಗೆ ಅಮಾನತುಪಡಿಸಿದ್ದರು.
ಸಚಿವ ಬೈರತಿ ಬಸವರಾಜ್ ಮತ್ತು ಬಿಜೆಪಿ ಎಂಎಲ್ ಸಿ ಆರ್ ಶಂಕರ್ ವಿರುದ್ಧ ಬುಧವಾರ ಮೇಲ್ಮನೆಯಲ್ಲಿ ನಿರ್ಣಯ ಮಂಡಿಸಿದ್ದ ನಾರಾಯಣ ಸ್ವಾಮಿ, ನಕಲಿ ದಾಖಲೆ ಸೃಷ್ಟಿಸಿ, ಬೆಂಗಳೂರು ಪೂರ್ವ ತಾಲೂಕಿನ ಕಲ್ಕೆರೆಯಲ್ಲಿ 35 ಎಕರೆ ಭೂಮಿ ಕಬಳಿಸಿರುವ ಆರೋಪವಿದೆ. ಭೂಮಿ ಮಾಲೀಕರು ಕೋರ್ಟ್ ಮೆಟ್ಟಿಲೇರಿದ್ದು, ಇಬ್ಬರು ಮುಖಂಡರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ನ್ಯಾಯಾಲಯ ತೀರ್ಪು ನೀಡಿದೆ. ಸಚಿವ ಬಸವರಾಜು ಇದರ ನೈತಿಕ ಹೊಣೆಹೊತ್ತು ರಾಜಿನಾಮೆ ನೀಡಬೇಕು ಎಂದು ಪಟ್ಟು ಹಿಡಿದು ಒತ್ತಾಯಿಸಿದ್ದರು.
ಸಭಾಪತಿ ಬಸವರಾಜ ಹೊರಟ್ಟಿ ಸಂಬಂಧ ಚರ್ಚೆಗೆ ಅವಕಾಶ ನೀಡಿಲಿಲ್ಲ. ಸಿಟ್ಟಾದ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟಿಸಿದರು. ಮನವಿ ಮಾಡಿದರೂ ಪ್ರಯೋಜನವಾಗದೇ ಸಭಾಪತಿ ಹೊರಟ್ಟಿ ಪ್ರತಿಭಟನಾನಿರತ 14 ಸದಸ್ಯರನ್ನು ಒಂದು ದಿನದ ಮಟ್ಟಿಗೆ ಅಮಾನತು ಮಾಡಿದ್ದರು.



