ಶೌರ್ಯ ಪ್ರಶಸ್ತಿ ಮೊತ್ತದಲ್ಲಿ ಭಾರಿ ಹೆಚ್ಚಳ: ಸಿಎಂ ಬೊಮ್ಮಾಯಿ ಘೋಷಣೆ

ಬೆಳಗಾವಿ: ಶೌರ್ಯ ಹಾಗೂ ಶೌರ್ಯೇತರ ಪ್ರಶಸ್ತಿ ಪಡೆದ ಯೋಧರಿಗೆ ರಾಜ್ಯ ಸರ್ಕಾರ ನೀಡುವ ಅನುದಾನ ಹೆಚ್ಚಿಸಿ ಆದೇಶ ಹೊರಡಿಸಿದೆ. ಬೆಳಗಾವಿಯಲ್ಲಿ ವಿಜಯ್ ದಿವಸ್ ಅಂಗವಾಗಿ ಮುಖ್ಯಮಂತ್ರಿ ಮರಾಠಾ ಲೈಟ್ ಇನ್ಫೆಂಟ್ರಿ ರೆಜಿಮೆಂಟ್ ನ ತರಬೇತಿ ಶಾಲೆಯ ಯುದ್ಧ ಸ್ಮಾರಕಕ್ಕೆ ಗೌರವ ಸಲ್ಲಿಸಿದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ವಿಷಯ ಘೋಷಿಸಿದರು.
ಪರಮವೀರಚಕ್ರ ಪಡೆದವರಿಗೆ 25 ಲಕ್ಷದಿಂದ 1.5 ಕೋಟಿ ರೂ.ಗಳಿಗೆ, ಮಹಾವೀರಚಕ್ರ ವಿಜೇತರಿಗೆ 12 ಲಕ್ಷಕ್ಕೆ ಬದಲಾಗಿ 1.00 ಕೋಟಿ ರೂ.ಗಳು, ಅಶೋಕ ಚಕ್ರ ಪಡೆ ದವರಿಗೆ 25 ಲಕ್ಷ.ರೂಗಳಿಗೆ ಬದಲಾಗಿ 1.5 ಕೋಟಿ ರೂ.ಗಳು, ಕೀರ್ತಿ ಚಕ್ರ ಪಡೆವರಿಗೆ 1.00 ಕೋಟಿ ರೂ.ಗಳು, ವೀರಚಕ್ರ ವಿಜೇತರಿಗೆ 50 ಲಕ್ಷ ರೂ.ಗಳು, ಶೌರ್ಯ ಚಕ್ರ ವಿಜೇತರಿಗೆ 50 ಲಕ್ಷ ರೂ.ಗಳು, ಸೇನಾ/ನೌಕಾ/ ವಾಯು ಸೇನಾ ಮೇಡಲ್ ಪಡೆದವರಿಗೆ 15 ಲಕ್ಷ ರೂ.ಗಳು, ಮೆನ್ ಶನ್ ಎನ್.ಡಿ.ಎಸ್ ಪ್ಯಾಚ್ ಪಡೆದವರಿಗೆ 15 ಲಕ್ಷ ರೂ.ಗಳಿಗೆ ಹೆಚ್ಚಿಸಿ ಆದೇಶವನ್ನು ಹೊರಡಿಸಲಾಗಿದೆ ಎಂದು ಅವರು ತಿಳಿಸಿದರು.
ಪ್ರಶಸ್ತಿ ವಿಜೇತರಿಗೆ ಸುಮಾರು ಐದು ಪಟ್ಟು ಅನುದಾನವನ್ನು ಹೆಚ್ವಿಸಲಾಗಿದೆ. ಅವರ ಬಹಳ ವರ್ಷಗಳ ಬೇಡಿಕೆಯನ್ನು ಈಡೇರಿಸಿ ಆದೇಶವನ್ನು ಹೊರಡಿಸಿದೆ. ಇದು ಸೇನೆಗೆ ನಾವು ಸಲ್ಲಿಸುವ ಗೌರವ. ನಿವೃತ್ತ ರಾದ ಮೇಲೆ ಉತ್ತಮ ಜೀವನ ನಡೆಸಲು ಹಾಗೂ ಸಾವನ್ನಪ್ಪಿದಾಗ ಸಹಾಯ ಮಾಡುತ್ತಾ ಬಂದಿದ್ದೇವೆ. ಪ್ರಶಸ್ತಿ ಪಡೆದಾಗಲು ಅವರನ್ನು ಗೌರವಿಸುವ ನಿಟ್ಟಿನಲ್ಲಿ ಅನುದಾನವನ್ನು ಹೆಚ್ವಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು



