ಸತ್ತ ಕೇಂದ್ರ ಸರ್ಕಾರ, ನಿಷ್ಕ್ರಿಯ ರಾಜ್ಯ ಸರ್ಕಾರ: ಮುಖ್ಯಮಂತ್ರಿ ಚಂದ್ರು ವ್ಯಂಗ್ಯ

ರಾಮನಗರ: ಜನಸಾಮಾನ್ಯರಿಗೆ ಹೊರೆಯಾಗಿರುವ ಕೇಂದ್ರ ಸರ್ಕಾರ ಸತ್ತು ಹೋಗಿದೆ. ನಮ್ಮನ್ನಾಳುತ್ತಿರುವ ರಾಜ್ಯ ಸರ್ಕಾರ ನಿಷ್ಕ್ರಿಯವಾಗಿದೆ. ಇಂತಹ ಸರ್ಕಾರವನ್ನು ಕಿತ್ತೊಗೆಯುವ ಸಂದರ್ಭ ಈಗ ಒದಗಿ ಬಂದಿದೆ. ಕಾಂಗ್ರೆಸ್ ಸರ್ಕಾರ ಮಾತ್ರ ಉತ್ತಮ ಆಡಳಿತ ನೀಡುತ್ತದೆ ಎಂದು ಮಾಜಿ ಗಡಿನಾಡ ಪ್ರಾಧಿಕಾರದ ಅಧ್ಯಕ್ಷ, ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು ಹೇಳಿದರು.
ಚನ್ನಪಟ್ಟಣ ತಾಲ್ಲೂಕು ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಬೆಲೆ ಏರಿಕೆ ವಿರುದ್ಧ ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಕಳೆದ 70 ವರ್ಷಗಳ ಕಾಲ ನೀಡಿದ ಆಡಳಿತದ ಒಂದು ಭಾಗದಷ್ಟು ಉತ್ತಮ ಆಡಳಿತ ನೀಡಿಲ್ಲ. ಇಂತಹ ಸರ್ಕಾರದ ಅವಶ್ಯಕತೆ ನಮಗಿಲ್ಲ. ಮುಂಬರುವ ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರ ಹಿಡಿಯಲಿವೆ. ಬಿಜೆಪಿ ನೇತೃತ್ವದ ಸರ್ಕಾರದಿಂದ ಬೇಸತ್ತ ಜನರು ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಲಿದ್ದಾರೆ ಎಂದು ಭವಿಷ್ಯ ನುಡಿದರು.
ವಿಧಾನ ಪರಿಷತ್ ಸದಸ್ಯ ಎಸ್ ರವಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ರೂಪಾಯಿ ಲೆಕ್ಕದಲ್ಲಿ ಸಿಲಿಂಡರ್ ಮತ್ತು ಪೆಟ್ರೋಲ್ ಬೆಲೆ ಏರಿಕೆಯಾದಾಗ ತಲೆ ಮೇಲೆ ಸಿಲಿಂಡರ್ ಹೊತ್ತುಕೊಂಡು ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು, 900 ರೂಪಾಯಿ ಸಿಲಿಂಡರ್ 100 ರೂಪಾಯಿಗೂ ಹೆಚ್ಚು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದ್ದರೂ ಏಕೆ ಮಾತನಾಡುತ್ತಿಲ್ಲ. ಜನಸಾಮಾನ್ಯರು ದಿನನಿತ್ಯ ಬಳಸುವ ಎಲ್ಲಾ ಪದಾರ್ಥಗಳು ದುಪ್ಪಟ್ಟು ಬೆಲೆಯಾಗಿವೆ ಯಾಕೆ ಇದರ ವಿರುದ್ಧ ಮಾತನಾಡುತ್ತಿಲ್ಲ ಎಂದು ಕಿಡಿಕಾರಿದರು.
ಸ್ಪನ್ ಸಿಲ್ಕ್ ಮಿಲ್ ನಿಂದ ತಾಲ್ಲೂಕು ಕಚೇರಿಯ ವರೆಗೆ ಎಲ್ಲಾ ಕಾಂಗ್ರೆಸ್ ನಾಯಕರು, ಸೈಕಲ್, ಎತ್ತಿನಗಾಡಿ ಮತ್ತು ಜಟಕಾ ಗಾಡಿಗಳ ಮೂಲಕ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ, ಜಾಥಾ ತೆರಳಿದರು. ನಂತರ ತಾಲ್ಲೂಕು ಕಚೇರಿಯಲ್ಲಿ ಗ್ರೇಡ್ 2 ತಹಶೀಲ್ದಾರ್ ಲಕ್ಷ್ಮಿದೇವಮ್ಮ ನವರಿಗೆ ಮನವಿ ಸಲ್ಲಿಸಿದರು.
