
ಬೆಂಗಳೂರು : ಮಳೆ ಹಾನಿ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ಪರಿಶೀಲನೆ ಕಾರ್ಯಕ್ರಮವನ್ನು ಎರಡನೇ ದಿನವೂ ಮುಂದುವರಿಸಿದ್ದಾರೆ.
ಬುಧವಾರ ಅವರು, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರು ಪ್ರತಿನಿಧಿಸುವ ಬೆಂಗಳೂರಿನ ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಿರಡಿ ಸಾಯಿ ಬಡಾವಣೆಗೆ , ಹೆಣ್ಣೂರು ಮುಖ್ಯರಸ್ತೆಯ ಪಟೇಲ್ ಮುನಿಶಾಮಪ್ಪ ಬಡಾವಣೆಯಲ್ಲಿ ಮಳೆಯಿಂದ ಉಂಟಾದ ಸಮಸ್ಯೆ ಹಾಗೂ ತೊಂದರೆಗಳ ಕುರಿತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಪರಿಶೀಲನೆ ನಂತರ ಮಧ್ಯಾಹ್ನ ಬಿಬಿಎಂಪಿ ಇಂಜಿನಿಯರ್ ಗಳ ಸಭೆಯನ್ನು ಸಿಎಂ ನಡೆಸಲಿದ್ದಾರೆ. ಹೆಚ್ಚಿನ ಮಳೆ ಬಂದಾಗ, ರಾಜಕಾಲುವ ತುಂಬಿ ಹರಿದು, ಮನೆಗಳಿಗೆ ನೀರು ನುಗ್ಗುವುದು ಮತ್ತು ಅದರ ತಡೆಗೆ ಕೈಗೊಂಡಿರುವ ಕಾಮಗಾರಿ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚಿಸಲಿದ್ದಾರೆ.
ಮಂಗಳವಾರ ಸಿಎಂ ಜಕ್ಕೂರು, ಯಲಹಂಕ, ಮಾನ್ಯತಾ ಪಾರ್ಕ್ ಮತ್ತಿತರ ಕಡೆ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.



