ಜಿಲ್ಲಾ ಸುದ್ದಿಬಾಗಲಕೋಟೆ
ಬಾಗಲಕೋಟೆ ಜಿಲ್ಲೆಯಲ್ಲಿ ಎಸಿಬಿ ದಾಳಿ : ಬೆಳಗಾವಿ ಜಿಲ್ಲೆಯ ಅಧಿಕಾರಿ ಸಂಬಂಧಿ ಮೇಲೆ ದಾಳಿ ಪರಿಶೀಲನೆ

ಬಾಗಲಕೋಟೆ: ಆದಾಯಕ್ಕಿಂತ ಹೆಚ್ಚು ಆಸ್ತಿ ಆರೋಪ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ್ ನಲ್ಲಿ ಹಿರಿಯ ಸಾರಿಗೆ ಅಧಿಕಾರಿ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದು, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಬುದ್ನಿ ಪಿಎಂ ಗ್ರಾಮದ ಅವರ ಸಂಬಂಧಿ ಮನೆಯಲ್ಲೂ ಪರಿಶೀಲನೆ ನಡೆಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬುದ್ನಿ ಪಿ ಎಂ ಗ್ರಾಮದ ತೋಟದ ಮನೆ ಮೇಲೆ ದಾಳಿ ಮಾಡಿ ಸಂಬಂಧಿಕರ ವಿಚಾರಣೆ ನಡೆಸಿದ್ದಾರೆ. ಸದ್ಯ ಗೋಕಾಕ್ ಆರ್ ಟಿ ಓ ಕಚೇರಿಯ ಅಧಿಕಾರಿ ಸದಾಶಿವ ಮರಿಲಿಂಗಣ್ಣವರ ಸಂಬಂಧಿಕರ ಮನೆ ಮೇಲೂ ದಾಳಿ ನಡೆಸಲಾಗಿದೆ.
ಬಾಗಲಕೋಟೆ ಎಸಿಬಿ ಇನ್ಸ್ಪೆಕ್ಟರ್ ಸಮೀರ್ ಮುಲ್ಲಾ ನೇತೃತ್ವದಲ್ಲಿ ಐದು ಜನ ತಂಡದಿಂದ ದಾಳಿ ಮಾಡಿ, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಸದಾಶಿವ ಹಿಂದೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ವಿಭಾಗದ ಆರ್ ಟಿಒ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಸದಾಶಿವ ಸದ್ಯ ಗೋಕಾಕ್ ನಲ್ಲಿ ಹಿರಿಯ ಮೋಟಾರ್ ಇನ್ಸ್ಪೆಕ್ಟರ್ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.




