ಖಾಸಗಿ ಕ್ರಿಪ್ಟೋ ಕರೆನ್ಸಿ ಹಾಗೂ ಅಧಿಕ ಡಿಜಿಟಲ್ ಕರೆನ್ಸಿ ನಿಷೇಧಕ್ಕೆ ಕೇಂದ್ರ ಸಿದ್ಧತೆ

ನವದೆಹಲಿ: ಖಾಸಗಿ ಕ್ರಿಪ್ಟೋ ಕರೆನ್ಸಿ ಹಾಗೂ ಅಧಿಕ ಡಿಜಿಟಲ್ ಕರೆನ್ಸಿಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ಹೊಸ ಮಸೂದೆ ಮಂಡಿಸಲು ಸಿದ್ಧತೆ ನಡೆಸಿರುವುದು, ದೇಶದಲ್ಲಿ ತಲ್ಲಣ ಮೂಡಿಸಿದ್ದು, ಕ್ರಿಪ್ಟೋ ಮಾರುಕಟ್ಟೆ ದಿಢೀರ್ ಕುಸಿತ ಕಂಡಿದೆ.
ನವೆಂಬರ್ 23ರಂದು ರಾತ್ರಿ 11.15 ಸಮಯದಲ್ಲಿ ಇದ್ದಂತೆ ಎಲ್ಲಾ ಪ್ರಮುಖ ಕ್ರಿಪ್ಟೋ ಕರೆನ್ಸಿಗಳ ಮೌಲ್ಯ ಶೇ.15ಕ್ಕಿಂತಲೂ ಅಧಿಕವಾಗಿ ಕುಸಿತಗೊಂಡಿದೆ. ಬಿಟ್ ಕಾಯಿನ್ ಬೆಲೆ ಶೇ.17 ಕ್ಕೂ ಹೆಚ್ಚು ಕುಸಿದಿದೆ. ತೆಥರ್ ಶೇ.18, ಎಥೆರಿಯಂ ಶೇ.15ರಷ್ಟು ಕುಸಿತ ಕಂಡಿದೆ.
ದೇಶದಲ್ಲಿ ಹೊಸ ಮಸೂದೆಗೆ ಸಂಬಂಧಿಸಿದಂತೆ ಲಭ್ಯವಾಗಿರುವ ಮಾಹಿತಿ ಪ್ರಕಾರ ನ.29ರಿಂದ ಆರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡಿಸಲು ಉದ್ದೇಶಿಸಲಾಗಿದೆ. ಇದು ದೇಶದ ಎಲ್ಲಾ ಖಾಸಗಿ ಕ್ರಿಪ್ಟೋ ಕರೆನ್ಸಿಗಳನ್ನು ನಿಷೇಧಿಸಲಿದೆ.
ಗ್ರಾಹಕರ ಹಣದ ಭದ್ರತೆ ಮತ್ತು ಹೂಡಿಕೆ ಅವಕಾಶಗಳಿಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಜಾಹೀರಾತುಗಳುಗಳು ಪ್ರಕಟವಾಗುತ್ತಿರುವುದು ಜನರನ್ನು ತಪ್ಪು ದಾರಿಗೆ ಎಳೆಯವಂತಹ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಸರ್ಕಾರ ಹೇಳಿದೆ.
ಮಸೂದೆ ಅಂಗೀಕಾರ ಪ್ರಕ್ರಿಯೆ ಚಳಿಗಾಲದ ಅಧಿವೇಶನದಲ್ಲೇ ನಡೆಯುವ ಸಾಧ್ಯತೆಯಿದೆ. ಭಾರತದ ರಿಸರ್ವ್ ಬ್ಯಾಂಕ್ ತನ್ನದೇ ಡಿಜಿಟಲ್ ಕರೆನ್ಸಿಯನ್ನು ಬಿಡುಗಡೆ ಮಾಡಲಿದೆ ಎಂದು ಸರ್ಕಾರ ಈಗಾಗಲೇ ಹೇಳಿಕೆ ನೀಡಿದೆ. ಆರ್ ಬಿಐನಿಂದ ಅಧಿಕೃತ ಡಿಜಿಟಲ್ ಕರೆನ್ಸಿಯ ಸೃಷ್ಟಿ ಮತ್ತು ಬಿಡುಗಡೆಗೆ ಅನುವು ಮಾಡಿಕೊಡುವ ಚೌಕಟ್ಟನ್ನು ಸೃಷ್ಟಿಸುವುದು ಇದರ ಉದ್ದೇಶ ಎಂದು ಹೇಳಲಾಗಿದೆ.
