ಬೆಳಗಾವಿ ಮತ್ತು ಮೈಸೂರು ಅಭ್ಯರ್ಥಿಗಳ ಸೋಲಿನ ಕುರಿತು ತನಿಖೆ: ಬಿ ಎಸ್ ಯಡಿಯೂರಪ್ಪ

ಬೆಳಗಾವಿ: ಬೆಳಗಾವಿ ಮತ್ತು ಮೈಸೂರಿನಲ್ಲಿ ಪಕ್ಷದ ಅಭ್ಯರ್ಥಿಗಳ ಸೋಲಿಗೆ ಕಾರಣ ಏನು ಎಂಬುದರ ಕುರಿತು ಸಮಗ್ರ ತನಿಖೆ ಮಾಡಿ ವಾಸ್ತವಿಕ ಸ್ಥಿತಿ ಅರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಿನ ಕ್ರಮ ಜರುಗಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಸುವರ್ಣಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಸಂಬಂಧ, ಸಿಎಂ ಬೊಮ್ಮಾಯಿ ಜತೆ ಈಗಾಗಲೇ ತಾವು ಚರ್ಚಿಸಿರುವುದಾಗಿ ತಿಳಿಸಿದರು.
ಎರಡೂ ಕ್ಷೇತ್ರಗಳಲ್ಲೆ ನೂರಕ್ಕೆ ನೂರು ನಾವು ಗೆದ್ದೇ ಗೆಲ್ಲುತ್ತೇವೆ ಎಂದುಕೊಂಡಿದ್ದೆವು. ಆದರೆ ಪಕ್ಷದ ಅಷ್ಟು ಜನ ಶಾಸಕರು, ಸಂಸದರು ಇದ್ದರೂ ಪಕ್ಷದ ಅಧಿಕೃತ ಅಭ್ಯರ್ಥಿಗಳು ಸೋಲಿರುವ ಬಗ್ಗೆ ಬಹಳಷ್ಟು ಚಿಂತನೆ ಮಾಡಬೇಕಿದೆ ಎಂದರು.
ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಎರಡು ದಿನ ವಿಶೇಷ ಚರ್ಚೆ ನಡೆಸಬೇಕೆಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸೂಚಿಸಿದ್ದಾರೆ. ಆ ಬಗ್ಗೆ ಮುಖ್ಯಮಂತ್ರಿ ಅವರು ಸಹಮತ ವ್ಯಕ್ತಪಡಿಸಿದ್ದಾರೆ. ಈ ಭಾಗದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸುದೀರ್ಘವಾಗಿ ಚರ್ಚೆ ಮಾಡಿ ಜ್ವಲಂತ ಸಮಸ್ಯೆಗಳ ಪರಿಹಾರ ಹುಡುಕುವ ಪ್ರಯತ್ನವನ್ನು ಬೊಮ್ಮಾಯಿ ನೇತೃತ್ವದ ಸರ್ಕಾರ ಮಾಡುತ್ತದೆ ಮತ್ತು ದಿಕ್ಕಿನಲ್ಲಿ ಅಧಿವೇಶನದಲ್ಲಿ ಚರ್ಚೆಗಳು ನಡೆಯಲಿವೆ ಎಂದು ತಿಳಿಸಿದರು.



