ರೈಲಿನಲ್ಲಿ ಬಾಂಬ್ ಇದೆ ಎಂದು ಹುಸಿ ಬಾಂಬ್ ಕರೆ ಮಾಡಿದ ವ್ಯಕ್ತಿಯ ಬಂಧನ

ದೇವನಹಳ್ಳಿ : ದೆಹಲಿ ಮತ್ತು ಬೆಂಗಳೂರು ನಡುವೆ ಸಂಚರಿಸುವ ಕೆಕೆ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಾಂಬ್ ಇಡಲಾಗಿದೆ ಎಂದು ವ್ಯಕ್ತಿಯೊಬ್ಬ ಕರೆ ಮಾಡಿದ್ದ ಹಿನ್ನೆಲೆಯಲ್ಲಿ ಬಾಂಬ್ ನಿಷ್ಕ್ರಿಯ ದಳ, ರೈಲ್ವೆ ಹಾಗೂ ಪೊಲೀಸ್ ಅಧಿಕಾರಿಗಳು ರೈಲಿನಲ್ಲಿ ತಪಾಸಣೆ ನಡೆಸಿದ್ದಾರೆ.
ಹುಸಿ ಕರೆ ಮಾಡಿದ್ದ ವ್ಯಕ್ತಿಯನ್ನು ರಾಯಚೂರಿನ ವಾಡಿಯಲ್ಲಿ ಬಂಧಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಪೊಲೀಸರು ತಿಳಿಸಿದ್ದಾರೆ.
ಆಂಧ್ರಪ್ರದೇಶ ಮಾರ್ಗವಾಗಿ ಈ ರೈಲು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಮೂಲಕ ಬೆಂಗಳೂರು ತಲುಪುತ್ತದೆ.
ರೈಲು ನಿಲ್ಲಿಸಿ ತಪಾಸಣೆ ನಡೆಸಿದರೆ ಜನರು ಭಯ ಭೀತಿಗೊಳಗಾಗುವ ಸಾಧ್ಯತೆ ಇರುವುದರಿಂದ ಚಲಿಸುತ್ತಿರುವ ರೈಲಿನಲ್ಲಿ ತಪಾಸಣೆ ನಡೆಸಲಾಗುತ್ತಿದೆ.
ಬಾಂಬ್ ನಿಷ್ಕ್ರಿಯ ದಳದವರು ಯಶವಂತಪುರ ರೈಲು ನಿಲ್ದಾಣದಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಂಬ್ ಇಡಲಾಗಿದೆ ಎಂದು ಕರೆ ಮಾಡಿದ್ದ ವ್ಯಕ್ತಿಯನ್ನು ಬಂಧಿಸಲಾಗಿದ್ದು. ಇದು ಸುಳ್ಳು ಕರೆ ಎಂದು ವಿಚಾರಣೆಯಿಂದ ಗೊತ್ತಾಗಿದೆ ಆದರೂ ತಪಾಸಣೆ ನಡೆಯುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.




