
ದಾವಣಗೆರೆ: ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪಕ್ಷೇತರರಾಗಿ ಕಣಕ್ಕಿಳಿದಿರುವ ಲಖನ್ ಜಾರಕಿಹೊಳಿ ಜೊತೆ ಮಾತನಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಚನ್ನಗಿರಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಲಖನ್ ಜೊತೆ ಸಿಎಂ ಬಸವರಾಜ್ ಬೊಮ್ಮಾಯಿ ಸಹ ಮಾತನಾಡಲಿದ್ದಾರೆ. ಲಖನ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ ವಿಷಯ ಗೊತ್ತಾಗಿದೆ ಎಂದು ತಿಳಿಸಿದರು.
ಯಡಿಯೂರಪ್ಪರ ಈ ಮಾತಿನಿಂದ ಲಖನ್ ಜೊತೆ ಮಾತನಾಡಿ ನಾಮಪತ್ರ ವಾಪಸ್ ಪಡೆಯುವಂತೆ ಬಿಜೆಪಿ ನಾಯಕರು ಪ್ರಯತ್ನ ಮಾಡ್ತಾರಾ ಎಂಬ ಚರ್ಚೆಗೆ ಕಾರಣವಾಗಿದೆ.
ಪರಿಷತ್ ಚುನಾವಣೆ ಪ್ರಚಾರ ಹಿನ್ನೆಲೆಯಲ್ಲಿ ಪ್ರಚಾರ ಆರಂಭಿಸಿದ್ದೇನೆ. ನಾವು 20 ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದೇವೆ. ಈ ಪೈಕಿ ಕನಿಷ್ಠ 15 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಎಲ್ಲ ಕಡೆ ಚೆನ್ನಗಿದೆ, ಎಲ್ಲೆಡೆ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈಗಾಗಲೇ ಒಂದು ಸುತ್ತಿನ ಪ್ರಚಾರ ಮುಗಿಸಿದ್ದೇನೆ.ಇದೀಗ ಎರಡನೇ ಸುತ್ತು ಆರಂಭ ಮಾಡುತ್ತೇನೆ ಎಂದ ಬಿಎಸ್ ವೈ ಅವರು, ಶಿವಮೊಗ್ಗದ ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಪರ ಪ್ರಚಾರ ನಡೆಸಿದರು.
ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಅವರು, ತಪ್ಪು ಯಾರೇ ಮಾಡಿದ್ದರೂ ಕ್ರಮ ಕೈಗೊಳ್ಳಲಿ. ಅಧಿಕಾರಿಗಳು ಯಾರೇ ಆಗಿರಲಿ, ತನಿಖೆ ಆದ ಮೇಲೆ ವಾಸ್ತವಿಕ ಸತ್ಯ ಗೊತ್ತಾಗುತ್ತೆ. ರೇಡ್ ಆಗೋದು ಏನು ಹೊಸದೇನು ಅಲ್ಲ. ತನಿಖೆ ಮಾಡಿ ಸರಿಯಾದ ಕ್ರಮ ತೆಗೆದುಕೊಂಡು ಬಿಗಿ ಮಾಡಬೇಕು ಎಂದು ಹೇಳಿದರು.



