
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಪ್ರಮುಖ ರಸ್ತೆಗಳಾದ ಆರ್ಟಿರಿಯಲ್, ಸಬ್ ಆರ್ಟಿರಿಯಲ್ ಹಾಗೂ ವಾರ್ಡ್ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳು ಹಾಗೂ ದುರಸ್ತಿ ರಸ್ತೆಗಳಿಗೆ ಡಾಂಬರೀಕರಣ ಮಾಡುವ ಕೆಲಸವನ್ನು ಕೂಡಲೆ ಕೈಗೆತ್ತಿಕೊಳ್ಳಲು ಮುಖ್ಯ ಆಯುಕ್ತ ಗೌರವ್ ಗುಪ್ತ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನಗರದಲ್ಲಿ ರಸ್ತೆಗುಂಡಿಗಳನ್ನು ಮುಚ್ಚುವ ಹಾಗೂ ಡಾಂಬರೀಕರಣ ಮಾಡುವ ಸಂಬಂಧ ವರ್ಚುವಲ್ ಮೂಲಕ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಎಲ್ಲಾ ರಸ್ತೆಗಳಲ್ಲಿ ತ್ವರಿತವಾಗಿ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸವಾಗಬೇಕು. ಯಾವುದಾದರು ರಸ್ತೆಯಲ್ಲಿ ರಸ್ತೆ ಗುಂಡಿ ಮುಚ್ಚದೇ ಇರುವುದು ಕಂಡುಬಂದರೆ ಸಂಬಂಧಿಸಿದ ಅಧಿಕಾರಿಗಳೇ ಜವಾಬ್ದಾರರು ಎಂದು ಎಚ್ಚರಿಕೆ ನೀಡಿದರು.
ನಗರದಲ್ಲಿ ದುರಸ್ತಿಯಾಗಿರುವ ರಸ್ತೆಗಳ ಪೈಕಿ, ಯಾವ್ಯಾವ ರಸ್ತೆಗಳನ್ನು ಕೂಡಲೆ ದುರಸ್ತಿಪಡಿಸಬಹುದು ಎಂಬುದನ್ನು ಪಟ್ಟಿ ಮಾಡಿ ಕೂಡಲೆ ಡಾಂಬರೀಕರಣ ಕೆಲಸವನ್ನು ಪ್ರಾರಂಭಿಸಬೇಕು. ತೀರಾ ದುರಸ್ತಿಯಲ್ಲಿರುವ ರಸ್ತೆಗಳಲ್ಲಿ ಯಾವುದೇ ಹಾನಿಯುಂಟಾಗದ ಹಾಗೆ ವಾಹನಗಳು ಸಂಚರಿಸುವ ರೀತಿಯಲ್ಲಿ ದುರಸ್ತಿ ಕಾರ್ಯ ಕೈಗೊಂಡು ನಂತರ ಡಾಂಬರೀಕರಣ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಸ್ತೆ ಗುಂಡಿಗಳನ್ನು ಮುಚ್ಚುವ ಹಾಗೂ ಡಾಂಬರೀಕರಣ ಮಾಡುವ ಸಂಬಂಧ ಎಲ್ಲಾ ವಲಯಗಳಲ್ಲಿಯೂ ತ್ವರಿತವಾಗಿ ಕೆಲಸ ಪ್ರಾರಂಭಿಸಬೇಕು. ಈ ಸಂಬಂಧ ಪ್ರತಿ ನಿತ್ಯ ಯಾವ್ಯಾವ ರಸ್ತೆಗಳಲ್ಲಿ ಕೆಲಸ ಪ್ರಾರಂಭಿಸಲಾಗಿದೆ, ಎಷ್ಟು ಕೆಲಸ ಮುಗಿದಿದೆ, ನಾಳೆ ಯಾವ್ಯಾವ ರಸ್ತೆ ದುರಸ್ತಿ ಮಾಡಲಾಗುತ್ತದೆ ಎಂಬುದರ ಮಾಹಿತಿ ನೀಡಬೇಕು. ಜೊತೆಗೆ 110 ಹಳ್ಳಿಗಳಿಗೆ ಸಂಬಂಧಿಸಿದ ರಸ್ತೆಗಳ ದುರಸ್ತಿ ಕಾರ್ಯ ಕೂಡಲೆ ಪ್ರಾರಂಭಿಸಿ ವಾಹನಗಳು ಸಂಚರಿಸುವ ರಸ್ತೆ ಪುನಶ್ಚೇತನ ಕಾರ್ಯ ಮಾಡಲು ಸೂಚಿಸಿದರು.
ಬೀದಿ ದೀಪಗಳ ನಿರ್ವಹಣೆಗೆ ಸೂಚನೆ:
ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ದೀಪಗಳ ನಿರ್ವಹಣೆ ಸರಿಯಾಗಿ ಆಗಬೇಕು. ಎಲ್ಲೆಲ್ಲಿ ಬೀದಿ ದೀಪಗಳಲ್ಲಿ ಎಂಬುದನ್ನು ವಿಧಾನಸಭಾ ಕ್ಷೇತ್ರವಾರು ಸಮೀಕ್ಷೆ ಮಾಡಿ ಅದನ್ನು ಪಟ್ಟಿ ಮಾಡಿ ಎಲ್.ಇ.ಡಿ ದೀಪಗಳನ್ನು ಅಳವಡಿಸಬೇಕು. ಹೆಚ್ಚುವರಿಯಾಗಿ ಬೀದಿ ದೀಪಗಳ ಅವಶ್ಯವಿದ್ದರೆ ಕೂಡಲೆ ಅಗತ್ಯ ಕ್ರಮ ಕೈಗೊಂಡು ಎಲ್ಲಾ ಕಡೆ ಬೀದಿ ದೀಪ ಅಳವಡಿಸಲು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.



