
ನವದೆಹಲಿ: ಮುಸ್ಲಿಂರು ಮತ್ತು ಇತರ ಅಲ್ಪಸಂಖ್ಯಾತರ ಮೇಲಿನ ಸಾಮೂಹಿಕ ಹಲ್ಲೆಗಳ ಕಳಂಕವನ್ನು ಹಿಂದುತ್ವಕ್ಕೆ ಅಂಟಿಸಿಕೊಳ್ಳದಿರುವ ಯತ್ನವೆಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿಕೆಯನ್ನು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಟೀಕಿಸಿದ್ದಾರೆ.
ಮುಸ್ಲಿಂರ ಮೇಲೆ ಹಲ್ಲೆ ನಡೆಸುವವರನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷಿಸಬೇಕು, ಮುಸ್ಲಿಂರನ್ನು ಈ ದೇಶದಿಂದ ಹೊರಗಟ್ಟಬೇಕೆಂದು ಹೇಳುವವರು ಹಿಂದೂಗಳಲ್ಲ ಎಂದು ಭಾಗ್ವತ್ ಹೇಳಿಕೆ ನೀಡಿದ್ದ ಬೆನ್ನಲ್ಲೇ ಓವೈಸಿ ಆಕ್ರೋಶ ಭರಿತ ಹೇಳಿಕೆ ಟ್ವೀಟ್ ಮೂಲಕ ಹೊರಬಿದ್ದಿದೆ.
ಮುಸ್ಲಿಂ ರಾಷ್ಟ್ರೀಯ ಮಂಚ್ ಕಾರ್ಯಕ್ರಮದಲ್ಲಿನ ಭಾಗ್ವತ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಓವೈಸಿ, ಕ್ರಿಮಿನಲ್ಗಳಿಗೆ ಗೋವು ಮತ್ತು ಎಮ್ಮೆಗಳ ನಡುವಿನ ವ್ಯತ್ಯಾಸ ಗೊತ್ತಿಲ್ಲ. ಆದರೆ ಸಮುದಾಯದ ಹೆಸರಿನಲ್ಲಿ ಜನರನ್ನು ಕೊಲ್ಲುವುದು ಗೊತ್ತಿದೆ. ಅಂಥ ಕ್ರಿಮಿನಲ್ಗಳನ್ನು ಹಿಂದುತ್ವ ಸರ್ಕಾರವು ಉತ್ತೇಜಿಸುತ್ತಿದೆ ಎಂದು ಆರೋಪಿಸಿದ್ದರೆ.
ಕಳೆದ ಕೆಲವು ವರ್ಷಗಳಲ್ಲಿ ಗೋರಕ್ಷಕರೆಂಬವರಿಂದ ಮುಸ್ಲಿಂರ ಮೇಲೆ ಆಗಿರುವ ಹಲ್ಲೆ ಘಟನೆಗಳ ಬಗ್ಗೆ ಅಂಕಿ ಅಂಶಗಳನ್ನು ಟ್ವೀಟ್ನಲ್ಲಿ ಉಲ್ಲೇಖಿಸಿರುವ ಓವೈಸಿ, ಮುಸ್ಲಿಂರನ್ನು ಕೊಂದವರನ್ನು ಹಾರ ಹಾಕಿ ಸ್ವಾಗತಿಸಿದ್ದರೆಂಬುದನ್ನೂ ಪ್ರಸ್ತಾಪಿಸಿದ್ದಾರೆ. ಇಂಥ ದ್ವೇಷದ ಹತ್ಯೆಗಳನ್ನು ಆಡಳಿತಾರೂಢ ಪಕ್ಷದೊಂದಿಗೆ ಇರುವ ಜನರು ಬೆಂಬಲಿಸುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ.



