ಕುತೂಹಲ ಕೆರಳಿಸಿದ ಸಿ ಎಂ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಭೇಟಿ

ಬೆಂಗಳೂರು: ಇಂದು ಬೆಳಗ್ಗೆ ಮುಖ್ಯಮಂತ್ರಿಗಳ ಗೃಹ ಕಛೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪರವರನ್ನು ಮಾಜಿ ಮುಖ್ಯಮಂತ್ರಿ, ಎಚ್ ಡಿ ಕುಮಾರಸ್ವಾಮಿ ಭೇಟಿ ಮಾಡಿದ್ದರು. ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಮಾತು ಕೇಳಿ ಬರುತ್ತಿರುವಾಗಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಮಂಡ್ಯದ ಮೈಶುಗುರು ಕಾರ್ಖಾನೆಯನ್ನು ಉಳಿಸುವ ಸಂಬಂಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಯಡಿಯೂರಪ್ಪರವರನ್ನು ಭೇಟಿ ಮಾಡಿದ್ದಾರೆ. ಎನ್ನಲಾಗುತ್ತಿದ್ದು, ಈ ಭೇಟಿ ಯಾವುದೇ ರಾಜಕೀಯ ಉದ್ದೇಶ ಹೊಂದಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಯಡಿಯೂರಪ್ಪ ನಾಯಕತ್ವದ ಬಗ್ಗೆ ಬಿಜೆಪಿಯಲ್ಲಿ ಅಸಮಾಧಾನ ಹೊಗೆಯಾಡುತ್ತಿರುವ ಈ ಸಂದರ್ಭದಲ್ಲಿ ಈ ಇಬ್ಬರ ಭೇಟಿ ರಾಜಕೀಯವಾಗಿ ಹಲವು ರೀತಿಯ ಕುತೂಹಲ ಮೂಡಿಸಿದೆ.
ಮುಖ್ಯಮಂತ್ರಿ ಯಡಿಯೂರಪ್ಪರವರು ರಾಮನಗರ ಜಿಲ್ಲೆಗೆ ಸಂಬಂದಿಸಿದಂತೆ ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ನನ್ನ ಮಾತನ್ನು ಕೇಳುವುದಿಲ್ಲ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಾತನ್ನು ಕೇಳುತ್ತಾರೆ. ಎಂದು ಸಚಿವ ಯೋಗೇಶ್ವರ್ ಹೇಳಿಕೆ ನೀಡಿರುವ ಬೆನ್ನಲ್ಲೇ ಕುಮಾರಸ್ವಾಮಿ, ಯಡಿಯೂರಪ್ಪ ಅವರನ್ನು ಭೇಟಿ ಮಾಡಿರುವುದು ನಾನಾ ರೀತಿಯ ಊಹಾಪೋಹಗಳಿಗೆ ಕಾರಣವಾಗಿದೆ.
ಮಂಡ್ಯ ಮೈಶುಗರ್ ಕಾರ್ಖಾನೆಯನ್ನು ಖಾಸಗೀಕರಣ ಮಾಡುವುದು ಬೇಡ. ಸರ್ಕಾರವೇ ಕಾರ್ಖಾನೆಯನ್ನು ನಡೆಸಲಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡ್ಯ ಜಿಲ್ಲೆಯ ಜೆಡಿಎಸ್ ಶಾಸಕರ ಜೊತೆ ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿದರು ಎನ್ನಲಾಗುತ್ತಿದ್ದು, ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಇಬ್ಬರೇ ಕೆಲ ಹೊತ್ತು ಪ್ರತ್ಯೇಕವಾಗಿ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
