ಚಿತ್ತೂರು ಬಸ್ ದುರಂತಕ್ಕೆ ಮೋದಿ ಸಂತಾಪ: ಪರಿಹಾರ ಘೋಷಿಸಿದ ಪ್ರಧಾನಿ

ಅಮರಾವತಿ: ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹೊರಟ್ಟಿದ್ದ ಬಸ್ ಮಗುಚಿ ಬಿದ್ದು 7 ಮಂದಿ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದ್ದು ಘಟನೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.
ಘಟನೆಯಲ್ಲಿ 45 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳಿಗೆ 50 ಸಾವಿರ ಪರಿಹಾರ ನೀಡುವುದಾಗಿ ಮೋದಿ ತಿಳಿಸಿದ್ದಾರೆ.
ಘಟನೆ ವಿವರ:
ಅನಂತಪುರ ಜಿಲ್ಲೆಯ ಧರ್ಮಾವರಂನ ರಾಜೇಂದ್ರ ನಗರದ ವೇಣು ಅವರ ನಿಶ್ಚಿತಾರ್ಥ ಚಿತ್ತೂರು ಜಿಲ್ಲೆಯ ನಾರಾಯಣವರಂ ಮೂಲದ ಯುವತಿ ಜೊತೆ ನಿಶ್ಚಯವಾಗಿತ್ತು. ಈ ಹಿನ್ನೆಲೆಯಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹೀಗಾಗಿ ರಾತ್ರಿ ವರನ ಕಡೆಯವರು ಖಾಸಗಿ ವಾಹನದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಹೊರಟ್ಟಿದ್ದರು.
ವರನ ಕುಟುಂಬದ ಸುಮಾರು 63 ಮಂದಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದು. ಚಾಲಕ ವೇಗವಾಗಿ ವಾಹನ ಚಲಾಯಿಸಿದ್ದರಿಂದ ತಿರುವಿನಲ್ಲಿ ಬಸ್ ನಿಯಂತ್ರಣ ತಪ್ಪಿ, ಸುಮಾರು 100 ಅಡಿಯ ಕಣಿವೆಗೆ ಉರುಳಿ ಬಿದ್ದಿದೆ. ಘಟನೆಯಲ್ಲಿ 7 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು,45ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
