ಭಟ್ಕಳ ತಾಲೂಕಿನಾದ್ಯಂತ ಭಾರೀ ಮಳೆ : ಕೆರೆಯಾಗಿ ಪರಿವರ್ತನೆಯಾದ ಶಂಶುದ್ದೀನ್ ಸರ್ಕಲ್

ಕಾರವಾರ : ಭಟ್ಕಳ ತಾಲೂಕಿನಲ್ಲಿ ಶನಿವಾರ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದ್ದು,ಶಂಶುದ್ದೀನ್ ಸರ್ಕಲ್ ನೀರಿನಿಂದ ಜಲಾವೃತಗೊಂಡಿದೆ.ಸರ್ಕಲ್ ದ್ವೀಪದಂತೆ ಪರಿವರ್ತನೆಯಾಗಿದೆ.
ಪಟ್ಟಣದ ಶಂಶುದ್ದೀನ್ ವೃತ್ತದಲ್ಲಿ ನೀರು ಹರಿಯದೇ ಜಲಾವೃತಗೊಂಡಿದೆ.ಕೆಲವು ಮನೆಗಳಿಗೂ ನೀರು ನುಗ್ಗಿದೆ. ಅಲ್ಲದೆ ತಾಲೂಕಿನ ಶಂಶುದ್ದೀನ್ ಸರ್ಕಲ್ ಅಕ್ಕಪಕ್ಕದಲ್ಲಿರುವ ಮೊಬೈಲ್ ಶಾಪ್ ಸೇರಿದಂತೆ ಅನೇಕ ಅಂಗಡಿಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದ್ದು,ಸ್ಥಳಕ್ಕೆ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66 ರ ಚತುಷ್ಪಥ ಕಾಮಗಾರಿ ಅಸಮರ್ಪಕವಾಗಿರುವ ಕಾರಣ ಈ ರೀತಿಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.ಪ್ರತಿ ವರ್ಷವೂ ಮಳೆಗಾಲದಲ್ಲಿ ಇದೆ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ಐ.ಆರ್.ಬಿ ಕಂಪನಿಯ ಅಸಮರ್ಪಕ ರಸ್ತೆ ಕಾಮಗಾರಿಯಿಂದ ತಾಲೂಕಿನಾದ್ಯಂತ ಪ್ರತಿ ವರ್ಷವೂ ಸಾರ್ವಜನಿಕರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ವರ್ಷಂಪ್ರತಿ ಸಾರ್ವಜನಿಕರು ಐ.ಆರ್. ಬಿ.ಕಂಪನಿಯ ಕಾಮಗಾರಿ ವಿರುದ್ಧ ಹಿಡಿ ಶಾಪವನ್ನು ಹಾಕುತ್ತಿದ್ದಾರೆ.
ಇನ್ನು ಭಟ್ಕಳ ತಾಲೂಕಿನ ಶಿರಾಲಿಯ ಜನತಾ ವಿದ್ಯಾಲಯ ಹಾಗೂ ಶಿರಾಲಿ ಸರ್ಕಲ್ ಸಂಪೂರ್ಣ ಜಲಾವೃತ್ತವಾಗಿ ಪರಿವರ್ತನೆಯಾಗಿದೆ.ಸಾರ್ವಜನಿಕರು ರಸ್ತೆಯ ನೀರಿನಲ್ಲಿ ಮೀನು ಹಿಡಿಯುವ ಅಣಕು ಪ್ರದರ್ಶನವನ್ನು ಮಾಡಿ ಪ್ರತಿಭಟಿಸುವ ಪ್ರಯತ್ನವನ್ನು ನಡೆಸಿದ್ದಾರೆ. ಹಲವು ಕಡೆ ರಸ್ತೆಗಳು ನೀರಿನಿಂದ ಜಲಾವೃತಗೊಂಡಿವೆ. ಇದರಿಂದ ವಾಹನ ಸವಾರರಿಗೆ ಹಾಗೂ ಪಾದಾಚಾರಿಗಳಿಗೆ ಬಾರಿ ಕಿರಿಕಿರಿ ಉಂಟಾಗಿದೆ. ಈ ಭಾಗದಲ್ಲೂ ಕೂಡ ಐ.ಆರ್.ಬಿ.ರಸ್ತೆ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಯಾವುದೇ ಮುಂದಾಲೋಚನೆ ನಡೆಸದೆ, ಸರಿಯಾದ ಒಳ ಚರಂಡಿಗಳನ್ನು ನಿರ್ಮಿಸದೇ, ರಸ್ತೆ ಕಾಮಗಾರಿ ನಡೆಸಿರುವುದೇ ಈ ಅವ್ಯವಸ್ಥೆಗೆ ಕಾರಣವಾಗಿದೆ ಎಂದು ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ಮುಖ್ಯವಾಗಿ ಗ್ರಾಮೀಣ ಭಾಗದಲ್ಲೂ ಮಳೆ ಮುಂದುವರಿದಿದೆ.ಜಿಲ್ಲೆಯ ಎಲ್ಲ ನದಿಗಳು ಉಕ್ಕಿ ಹರಿಯುತ್ತಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿ ಜನರಿಗೆ ನಷ್ಟ ಉಂಟಾಗಿದೆ.




