ಉತ್ತರ ಕನ್ನಡಜಿಲ್ಲಾ ಸುದ್ದಿ
ಕಾರವಾರ: ಲಾರಿಯಲ್ಲಿ ಸ್ಪಿರಿಟ್ ಸಾಗಾಟ : 30 ಲಕ್ಷದ ಸ್ವತ್ತು ವಶ

ಕಾರವಾರ : ಗ್ಲುಕೋಸ್ ತುಂಬಿದ ಲಾರಿಯಲ್ಲಿ ಅಕ್ರಮವಾಗಿ ಸ್ಪಿರಿಟ್ ಸಾಗಿಸುತ್ತಿದ್ದ ಲಾರಿಯನ್ನು ಚಾಲಕ ಸಮೇತ ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಈ ವೇಳೆ 2.53 ಲಕ್ಷ ಮೌಲ್ಯದ ಸ್ಪಿರಿಟ್ ವಶಕ್ಕೆ ಪಡೆಯಲಾಗಿದೆ.ಕಾರವಾರ ತಾಲೂಕಿನ ಮಾಜಾಳಿ ಚೆಕ್ ಪೋಸ್ಟ್ ಬಳಿ ಘಟನೆ ನಡೆದಿದೆ. ಗೋವಾದಿಂದ ಕೇರಳದ ಕೊಚ್ಚಿಗೆ ಸ್ಪಿರಿಟ್ ಸಾಗಿಸಲಾಗುತಿತ್ತು. ಮಾಜಾಳಿ ಚೆಕ್ ಪೋಸ್ಟ್ ಬಳಿ ಲಾರಿ ತಡೆದು ತಪಾಸಣೆ ನಡೆಸಿದಾಗ ಔಷಧಿ ತುಂಬಿದ ಲಾರಿಯಲ್ಲಿ ಸ್ಪಿರಿಟ್ ಇರುವುದು ಪತ್ತೆಯಾಗಿದೆ.
ಲಾರಿಯಲ್ಲಿ 35 ಲೀಟರ್ನ ಒಟ್ಟು 125 ಕ್ಯಾನ್ಗಳಲ್ಲಿ 4,375 ಲೀಟರ್ ಸ್ಪಿರಿಟ್ ವಶಕ್ಕೆ ಪಡೆಯಲಾಗಿದೆ. ಕೇರಳ ಮೂಲದ ಲಾರಿ ಚಾಲಕ ಜಿಷ್ಣು ಕೆ.ಎಂಬಾತನನ್ನು ಬಂಧಿಸಿದ್ದಾರೆ. 20.80 ಲಕ್ಷದ ಲಾರಿ, ಲಾರಿಯಲ್ಲಿದ್ದ 7.14 ಲಕ್ಷ ಮೌಲ್ಯದ 1 ಸಾವಿರ ಬಾಕ್ಸ್ ಔಷಧ ಹಾಗೂ 2,53,750 ರೂಪಾಯಿ ಮೌಲ್ಯದ ಸ್ಪಿರಿಟ್ ಸೇರಿ ಒಟ್ಟು 30,47,750 ರೂಪಾಯಿ ಸ್ವತ್ತು ವಶಕ್ಕೆ ಪಡೆಯಲಾಗಿದೆ. ಅಬಕಾರಿ ಉಪ ಆಯುಕ್ತೆ ವನಜಾಕ್ಷಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.




