ಕೇರಳದಿಂದ ಲಡಾಖ್ ವರೆಗೆ ಪಾದಯಾತ್ರೆ : ನ್ಯಾಯಕ್ಕಾಗಿ ಯಾತ್ರೆ ಪ್ರಾರಂಭಿಸಿದ ಯುವಕರು

ಉಡುಪಿ : ಯುವತಿಯೊಬ್ಬಳ ಹತ್ಯೆಯನ್ನು ಖಂಡಿಸಿ ನ್ಯಾಯಕೋರಿ ಕಾಲ್ನಡಿಗೆ ಯಾತ್ರೆ ಹಾಗು ಕಾಲ್ನಡಿಗೆ ಮೂಲಕ ಆರೋಗ್ಯದ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲೆಂದು ನಾಲ್ವರು ಯುವಕರು ಕೇರಳದಿಂದ ಲಡಾಖ್ ವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದು, ಶುಕ್ರಾವಾರ ಹೆಜಮಾಡಿ ತಲುಪಿದ್ದು ಶನಿವಾರ ಯಾತ್ರೆ ಮುಂದುವರಿಸಿದ್ದಾರೆ.
ಕೇರಳದ ತ್ರಿಶೂರು ಮುಳ್ಳಚೇರಿಯಲ್ಲಿ ನಡೆದ ಯುವತಿಯೊಬ್ಬಳ ಹತ್ಯೆಯನ್ನು ಖಂಡಿಸಿ ಗ್ಯಾರೇಜ್ ವೃತ್ತಿಯಲ್ಲಿರುವ ಅರುಣ್, ನ್ಯಾಯಕೋರಿ ಜುಲೈ 1ರಂದು ಕೇರಳದಿಂದ ಲಡಾಖ್ ವರೆಗೆ ಪಾದಯಾತ್ರೆ ಪ್ರಾರಂಭಿಸುತ್ತಾರೆ.ಇದೇ ಸಂದರ್ಭದಲ್ಲಿ ಕಾಲ್ನಡಿಗೆ ಮೂಲಕ ಆರೋಗ್ಯದ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲೆಂದು ತ್ರಿಶೂರ್ ನಿಂದ ವಸೀಂ ಅಲಿ ಹಾಗು ಅವರ ಸಂಬಂಧಿ ಗಫ್ಪಾರ್ ಹಾಗು ಮಲಪ್ಪುರಂ ನಿಂದ ಶಿಯಾಬ್ ಕಾಶ್ಮೀರ್ ಯಾತ್ರೆ ಹಮ್ಮಿಕೊಂಡಿದ್ದಾರೆ.
ವಿಶೇಷವೆಂದರೆ ವಸೀಂ ಅಲಿ ಹಾಗು ಗಪ್ಪಾರ್ ಹೊರತುಪಡಿಸಿ ಗುರುತು ಪರಿಚಯ ಇಲ್ಲದ ಇನ್ನಿಬ್ಬರು ಪ್ರತ್ಯೇಕವಾಗಿಯೇ ಯಾತ್ರೆ ಆರಂಭಿಸಿದ್ದು,ಕಾಕತಾಳೀಯ ಎಂಬಂತೆ ದಾರಿ ಮಧ್ಯೆ ಒಂದಾಗಿ,ಪರಸ್ಪರ ಪರಚಯಿಸಿಕೊಳ್ಳುತ್ತಾರೆ. ವಿಚಾರ ಮತ್ತು ಧರ್ಮ ಬೇರೆ ಬೇರೆಯಾದರೂ ಇವರ ಉದ್ದೇಶ ಒಂದೇ ಆಗಿದ್ದು ಒಗ್ಗಟ್ಟಿನೊಂದಿಗೆ ಯಾತ್ರೆ ಮುಂದುವರಿಸಿದ್ದಾರೆ ಎಂದು ಅರುಣ್ ತಿಳಿಸಿದ್ದಾರೆ.
ನಾಲ್ಕು ತಿಂಗಳ ಅವಧಿಯಲ್ಲಿ ಗೋವಾ,ಮಹಾರಾಷ್ಟ್ರ,ಮಧ್ಯಪ್ರದೇಶ, ಪಂಜಾಬ್, ಕಾಶ್ಮೀರ್ ಸೇರಿದಂತೆ ದಿನಕ್ಕೆ 35 ಕಿ.ಮಿ ನಂತೆ 3,500 ಕಿ.ಮಿ ದಾರಿ ಸಾಗಿ ದಾರಿಯುದ್ದಕ್ಕೂ ಸಂದೇಶವನ್ನು ನೀಡುತ್ತಾ ಲಡಾಖ್ ತಲುಪಲಿದ್ದಾರೆ. ರಾತ್ರಿ ವೇಳೆ ಪೆಟ್ರೋಲ್ ಬಂಕ್ ನಲ್ಲಿ ವಿಶ್ರಾಂತಿ ಪಡೆಯುವ ಇವರು ಯಾತ್ರೆಯಲ್ಲಿ ಬೇಕಾಗುವ ಅಗತ್ಯ ವಸ್ತುಗಳನ್ನು ಇರಿಸಿಕೊಂಡಿದ್ದು, ಅಲ್ಲಲ್ಲಿ ಪೊಲೀಸರು ಮತ್ತು ಸ್ಥಳೀಯರ ಸಹಾಯವನ್ನು ಪಡೆದು ಮುಂದೆ ಸಾಗುತ್ತಾರೆ. ಲಡಾಖ್ ತಲುಪಿದ ಮೇಲೆ ವಿಮಾನ ಅಥವಾ ರೈಲು ಯಾತ್ರೆ ಮೂಲಕ ಕೇರಳಕ್ಕೆ ಹಿಂತಿರುಗಿ ಬರುವುದಾಗಿ ವಸೀಂ ತಿಳಿಸಿದ್ದಾರೆ.
