ಆರಂಭದಲ್ಲಿಯೇ ಇಳಿಕೆ ಕಂಡ ಮಳೆ ; ಕೃಷಿ ಜಮೀನಿಗೆ ನೀರಿನ ಕೊರತೆ

ವರದಿ : ತೇಜಸ್ವಿ ನಾಯ್ಕ
ಕಾರವಾರ : ಜಿಲ್ಲೆಯ ಹಲವು ಭಾಗಗಳಲ್ಲಿ ರೈತರು ನಾಟಿ ಕಾರ್ಯಕ್ಕೆಮುಂದಾಗಿದ್ದು, ಜುಲೈ ಆರಂಭದಲ್ಲಿಯೇ ಮಳೆ ಕೈ ಕೊಟ್ಟಿದ್ದರಿಂದ ಕೃಷಿ ಜಮೀನಿಗೆ ಸಾಕಷ್ಟು ನೀರಿನ
ಕೊರತೆ ಎದುರಾಗಿದೆ. ಕೆಲವೆಡೆ ನಾಟಿ ಕಾರ್ಯಕ್ಕೆ ಹಿನ್ನೆಡೆಯಾಗಿದೆ. ರೈತರು ತಮ್ಮ ಹೊಲಗಳಲ್ಲಿ ನಾಟಿಗೆ ಪೂರಕವಾದ ಕೃಷಿ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದಾರೆ.
ಆದರೆ ಜಿಲ್ಲೆಯಲ್ಲಿ ಜುಲೈ ತಿಂಗಳ ಆರಂಭದಲ್ಲಿಯೇ ಮಳೆ ಪ್ರಮಾಣ ಇಳಿಕೆ ಕಂಡಿದ್ದು, ಕೆಲ ಭಾಗಗಳಲ್ಲಿ ರೈತರ ನಾಟಿ ಕಾರ್ಯಕ್ಕೆ ತೀವ್ರ ಹಿನ್ನೆಡೆ ಅನುಭವಿಸುವಂತಾಗಿದೆ. ಹೊನ್ನಾವರ ತಾಲೂಕಿನಲ್ಲಿ ಸರಿ ಸುಮಾರು 2067 ಹೆಕ್ಟೇರ್ ಪ್ರದೇಶಗಳಲ್ಲಿ ರೈತರು ಮಳೆ ಆಶ್ರಿತ ಭತ್ತದ ಬೆಳೆಗಳನ್ನು ಬೆಳೆಯುತ್ತಿದ್ದಾರೆ.1825 ಹೆಕ್ಟೇರ್ ಪ್ರದೇಶದಲ್ಲಿ ಅಧಿಕ ಇಳುವರಿ ಭತ್ತ, 182 ಹೆಕ್ಟೇರ್ ಪ್ರದೇಶಗಳಲ್ಲಿ ಸ್ಥಳೀಯ ಭತ್ತ ಹಾಗೂ 60 ಹೆಕ್ಟೇರ್ ಪ್ರದೇಶಗಳಲ್ಲಿ ಯಾಂತ್ರಿಕೃತ ನಾಟಿ ಸೇರಿ ಒಟ್ಟೂ 2067 ಹೆಕ್ಟೇರ್ ಪ್ರದೇಶಗಳಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ. ಮಳೆಯ ನಿರೀಕ್ಷೆಯಲ್ಲಿದ್ದ ರೈತರು ಜುಲೈ ತಿಂಗಳಲ್ಲಿ ಮಳೆ ಕೈ ಕೊಡಲಿದೆ ಎನ್ನುವ ಅಂದಾಜು ಇರಲಿಲ್ಲ. ಹೀಗಾಗಿ ರೈತರು ಮೇ ಮತ್ತು ಜೂನ್ ತಿಂಗಳ ಮಧ್ಯಂತರದಲ್ಲಿ ನಾಟಿಗೆ ಪೂರಕವಾಗಿ ಬೀಜ ಬಿತ್ತನೆ ಮಾಡಿಕೊಂಡಿದ್ದರು.
ಇದೀಗ ಜುಲೈ ಆರಂಭದಲ್ಲಿ ಮಳೆ ಇಳಿಮುಖವಾದ ಹಿನ್ನೆಲೆಯಲ್ಲಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ ಎನ್ನಲಾಗಿದೆ.ಬಿತ್ತನೆ ಮಾಡಿದ ಸಸಿಗಳು ಬಿಸಿಲು ಮಳೆಯಾಟದಿಂದ ಕಂದು ಬಣ್ಣಕ್ಕೆ ತಿರುಗಿದೆ, ಮಾತ್ರವಲ್ಲ ಸಸಿಗಳಿಗೆ ನಾಟಿ ಅವಧಿಯೂ ಮೀರಲಾರಂಭಿಸಿದೆ. ಹೀಗಾಗಿ ರೈತರಿಗೆ ನಾಟಿ ಮಾಡದೇ ಬಿಡುವ ಹಾಗೂ ಇಲ್ಲ ಇತ್ತ ಸಸಿಗಳನ್ನು ಬೆಳೆಸುವ ಹಾಗೂ ಇಲ್ಲದೆ ಗೊಂದಲದಲ್ಲಿದ್ದಾರೆ. ಕೃಷಿ ಜಮೀನಿನಲ್ಲಿ ನೀರಿಲ್ಲದೆ ಹದಗೊಳಿಸಿದ ಮಣ್ಣು ಗಟ್ಟಿಯಾಗಿ ಉಳುಮೆಗೂ ತೊಂದರೆಯಾಗುತ್ತಿದೆ.
ದಿನಕ್ಕೆ ಒಂದೆರಡು ಬಾರಿ ಮಳೆಯಾಗಿ ನಂತರ ಬಿಸಿಲಿನ ವಾತಾವರಣ ಕಾಣಿಸಿಕೊಳ್ಳುತ್ತಿರುವುದು ರೈತರಲ್ಲಿ ಆತಂಕ ಮನೆ ಮಾಡಿದೆ. ಜಿಲ್ಲೆಯ ಮಂಕಿ, ಚಂದಾವರ, ಶಿರೂರು, ಕಡ್ನೀರು, ತೊರಗೋಡ, ಹಡಿನಬಾಳ, ಗೇರುಸೊಪ್ಪಾ, ಮಾವಿನಕುರ್ವಾ, ಚಂದಾವರ, ಮೂರೂರು, ಮಿರ್ಜಾನ್, ಗೇರುಸೊಪ್ಪ, ಅವರ್ಸಾ, ಅಮದಳ್ಳಿ, ತೋಡೂರು, ಗೋಕರ್ಣ, ಮುರ್ಡೇಶ್ವರ, ಶಿರಾಲಿ ಮುಂತಾದ ಭಾಗಗಳಲ್ಲಿ ನಾಟಿ ಕಾರ್ಯ ಆರಂಭವಾಗಿದೆ. ಸ್ಥಳೀಯ ಭತ್ತಗಳಾದ ಬಂಟವಾಳ, ಸುಂದರಿ, ಗೌರಿ, ಮಲಬಾರ್, ಹಳಗ, ಕಗ್ಗ, ರಾಶಿ, ಚಿಟಕ, ಕೆಂಪಿ ಹೀಗೆ ಮುಂತಾದ ಅನೇಕ ಜಾತಿಯ ಭತ್ತದ ಸಸಿಗಳನ್ನು ನಾಟಿ ಮಾಡುತ್ತಾರೆ ಉತ್ಸಾಹಿ ಯುವಕರು, ಕಾಲೇಜು ವಿದ್ಯಾರ್ಥಿಗಳೂ ಸಹ ನಾಟಿ ಕಾರ್ಯದಲ್ಲಿ ತೊಡಗಿಕೊಂಡು ಕೃಷಿಯತ್ತ ಹೆಜ್ಜೆ ಹಾಕುತ್ತಿದ್ದಾರೆ.
ಹೊನ್ನಾವರ ತಾಲೂಕಿನ ಕಡ್ನೀರು, ಮೇಲಿನಕೇರಿ ಭಾಗದಲ್ಲಿ ನೂರಾರು ಎಕರೆ ಕೃಷಿ ಜಮೀನು ಇದ್ದು, ಪ್ರತೀ ವರ್ಷ ಮುಂಗಾರು ಹಂಗಾಮಿಗೆ ಭತ್ತ ಬೆಳೆಯುತ್ತಾರೆ. ಆದರೆ ಈ ಬಾರಿ ಬಿಸಿಲಿನ ತಾಪಮಾನ ಹೆಚ್ಚಿರುವುದರಿಂದ ದೂರದ ದೋಸೆಕಟ್ಟು ಬಾಂದಾರ್ಗೆ ಹೋಗಿ ನೀರು ತಂದು ಗದ್ದೆ ನಾಟಿ ಮಾಡಲಾಗುತ್ತಿದೆ.
ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರುತ್ತಿದ್ದು, ರಾಜ ಕಾಲುವೆಯಲ್ಲಿ ಬರುವ ನೀರು ಆವಿಯಾಗತೊಡಗಿದೆ. ಇದರಿಂದ ಆ ಭಾಗದಲ್ಲಿ ನಾಟಿ ಕಾರ್ಯಕ್ಕೆ ಹಿನ್ನೆಡೆಯಾಗಿದೆ. ಪ್ರತಿ ದಿನ ಬಾಂದಾರ್ ನಿಂದ ನೀರು ತಂದು ಗದ್ದೆ ನಾಟಿ ಮಾಡುವ ಮೂಲಕ ರೈತರು ಹೈರಾಣಾಗಿದ್ದಾರೆ.
ಬಿಸಿಲಿಗೆ ಸುಸ್ತಾದ ಜೋಡೆತ್ತುಗಳು
ಜಿಲ್ಲೆಯಲ್ಲಿ ಮುಂದುವರಿದ ಬಿಸಿಲಿನ ತಾಪಮಾನಕ್ಕೆ ಬೆಳಿಗ್ಗೆಯಿಂದ ಉಳುಮೆ ಮಾಡುತ್ತಿರುವ ಜೋಡೆತ್ತುಗಳು ಉಳುಮೆ ಮಾಡಲಾಗದೆ ಚಡಪಡಿಸುತ್ತಿವೆ.
ಮುಂಜಾನೆಯಿಂದ ಮಧ್ಯಾಹ್ನ 2 – 3 ಗಂಟೆಯವರೆಗೆ ಉಳುಮೆ ಮಾಡುವ ಎತ್ತುಗಳು ಈಗ ಬೆಳಗಿನ 11 ಗಂಟೆವರೆಗೂ ಉಳುಮೆ ಮಾಡಲು ಹಿಂದೇಟು ಹಾಕುತ್ತಿವೆ. ಇದರಿಂದಾಗಿ ರೈತರು ಈ ಬಾರಿ ಇನ್ನಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ.




