ಉಡುಪಿ

ಉಡುಪಿ ಕಾಂಗ್ರೆಸ್ ಕಾರ್ಯಕರ್ತನಿಗೆ ಪೊಲೀಸರಿಂದ ಹಲ್ಲೆ; ಮಾಜಿ ಸಿಎಂ ಸಿದ್ದರಾಮಯ್ಯ ಖಂಡನೆ

ಉಡುಪಿ: ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತನಿಗೆ ಪೊಲೀಸರು ಹಲ್ಲೆ ನಡೆಸಿರುವ ವಿಚಾರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಕಾರ್ಕಳ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣ ಹಿರ್ಗಾನ ಎಂಬವರಿಗೆ ಕಾರ್ಕಳ ನಗರ ಪೊಲೀಸ್ ಠಾಣಾ ಎಸ್ಸೈ ಮಧು ಹಲ್ಲೆ ನಡೆಸಿದ್ದಾಗಿ ಕಾಂಗ್ರೆಸ್ ಪಕ್ಷ ಆರೋಪಿಸಿದೆ. ವರ್ಷದ ಹಿಂದೆ ಫೇಸ್ಬುಕ್ನಲ್ಲಿ ಹಾಕಿದ್ದ ಪೋಸ್ಟ್ ಒಂದಕ್ಕೆ ಸಂಬಂಧಿಸಿದಂತೆ ರಾಧಾಕೃಷ್ಣ ಅವರನ್ನು ವಿಚಾರಣೆಗೆ ಕಾರ್ಕಳ ಪೊಲೀಸರು ಕರೆಸಿಕೊಂಡಿದ್ದರು. ಯೋಧರ ವಿರುದ್ಧ ರಾಧಾಕೃಷ್ಣ ನಾಯಕ್ ಪೋಸ್ಟ್ ಹಾಕಿದ್ದಾಗಿ ಆರೋಪಿಸಲಾಗಿತ್ತು.

ಆದರೆ ತನ್ನ ಹೆಸರಿನಲ್ಲಿ ನಕಲಿ ಅಕೌಂಟ್ ಮಾಡಿ ಈ ಪೋಸ್ಟ್ ಹಾಕಲಾಗಿದೆ ಎಂದು ರಾಧಾಕೃಷ್ಣ ವಾದಿಸುತ್ತಾ ಬಂದಿದ್ದರು. ಇತ್ತೀಚೆಗೆ ಬೆಂಗಳೂರಿನಿಂದ ವಾಪಸಾಗಿದ್ದ ರಾಧಾಕೃಷ್ಣ ಕಾರ್ಕಳದಲ್ಲಿ ನೆಲೆಸಿದ್ದರು. ಈ ವೇಳೆ ಕಾರ್ಕಳ ಪೊಲೀಸರು ಅವರನ್ನು ತನಿಖೆಗೆ ಬರುವಂತೆ ಸೂಚನೆ ನೀಡಿದ್ದರು. ತನಿಖೆಗೆ ಹಾಜರಾದ ವೇಳೆ ಎಸ್ಐ ಮಧು ಅವರು ಹಲ್ಲೆ ನಡೆಸಿದ್ದಾಗಿ ರಾಧಾಕೃಷ್ಣ ದೂರಿದ್ದಾರೆ.

ವರ್ಷದಷ್ಟು ಹಳೆಯ ಪೋಸ್ಟಿಗೆ ಮತ್ತೆ ಠಾಣೆಗೆ ಕರೆಸಿಕೊಂಡು, ಹಲ್ಲೆ ನಡೆಸಿದ್ದಾಗಿ ಆರೋಪಿಸಿದ್ದಾರೆ. ಹೃದಯದ ಕಾಯಿಲೆಯಿಂದ ಬಳಲುತ್ತಿರುವ ರಾಧಾಕೃಷ್ಣ ಗೆ, ಹಲ್ಲೆ ನಡೆಸಿರುವುದು ಅಮಾನವೀಯ ಎಂದು ಕಾಂಗ್ರೆಸ್ ನಾಯಕರು ಆಕ್ಷೇಪಿಸಿದ್ದಾರೆ. ಸದ್ಯ ರಾಧಾಕೃಷ್ಣ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ಪೊಲೀಸ್ ವರಿಷ್ಟಾಧಿಕಾರಿಗಳು ಶೀಘ್ರ ಕ್ರಮ ಕೈಗೊಂಡು ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button