ಮುರ್ಡೇಶ್ವರ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ : ಯುವಕನ ವಿರುದ್ದ ಪೋಕ್ಸೋ ಪ್ರಕರಣ ದಾಖಲು

ಕಾರವಾರ : ಮದುವೆಯಾಗುವುದಾಗಿ ನಂಬಿಸಿ ಬಲವಂತವಾಗಿ ಅಪ್ರಾಪ್ತೆ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ ಆರೋಪದ ಮೇಲೆ ವ್ಯಕ್ತಿಯೋರ್ವನ ಮೇಲೆ ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಟ್ಕಳ ತಾಲೂಕಿನ 16 ವರ್ಷದ ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಮುರ್ಡೇಶ್ವರದ ಹಿರೇದೋಮಿಯ ನಿತಿನ್ ಅಣ್ಣಪ್ಪ ನಾಯ್ಕ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ಬಾಲಕಿಯ ಜೊತೆ ಸ್ನೇಹ ಬೆಳೆಸಿಕೊಂಡಿದ್ದ ಈತ ಮದುವೆಯಾಗುವುದಾಗಿ ನಂಬಿಸಿದ್ದ. ಸೆಪ್ಟೆಂಬರ್ 1 ರಂದು ರಾತ್ರಿ ಅಪ್ರಾಪ್ತೆಗೆ ಫೋನ್ ಕರೆ ಮಾಡಿ ನಿನ್ನೊಂದಿಗೆ ಮಾತನಾಡಬೇಕು. ಮಾವಳ್ಳಿ – 2 ರ ಕನ್ನಡ ಶಾಲೆ ಸಮೀಪ ಬರುವಂತೆ ಹೇಳಿದ್ದಾನೆ. ಸ್ಥಳಕ್ಕೆ ಬಾಲಕಿ ತೆರಳಿದಾಗ ಆಕೆಗೆ ಹೆದರಿಸಿ ಬಲವಂತವಾಗಿ ಮನೆಯ ಒಳಗೆ ಕರೆದೊಯ್ದು ಎರಡು ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ದೂರಲಾಗಿದೆ.
ಅಲ್ಲದೆ ಕೃತ್ಯದ ಬಳಿಕ ಆರೋಪಿಯು ನಿನ್ನನ್ನು ಮದುವೆಯಾಗುತ್ತೇನೆ. ಅಲ್ಲಿಯವರೆಗೆ ಈ ಬಗ್ಗೆ ಯಾರಿಗೂ ಹೇಳಬೇಡ. ಹೇಳಿದರೆ ನಿನ್ನ ತಂದೆ -ತಾಯಿಯನ್ನು ಕೊಲೆ ಮಾಡುತ್ತೇನೆ ಎಂದು ಬಾಲಕಿಗೆ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.




