ಕೊಡಗುಜಿಲ್ಲಾ ಸುದ್ದಿ

Teachers Day : ಉತ್ತಮ ಸಾಧನೆಗೆ ಶಿಕ್ಷಕರ ಸಲಹೆ, ಮಾರ್ಗದರ್ಶನ ಅಗತ್ಯ: ಸಿಇಒ ಭಂನ್ವರ್ ಸಿಂಗ್ ಮೀನಾ

ಮಡಿಕೇರಿ : ಪ್ರತಿಯೊಬ್ಬರೂ ಜೀವನದಲ್ಲಿ ಒಳ್ಳೆಯ ಸಾಧನೆ ಮಾಡಲು ಶಿಕ್ಷಕರ ಸಲಹೆ ಮತ್ತು ಮಾರ್ಗದರ್ಶನ ಅತ್ಯಗತ್ಯ, ಆ ದಿಸೆಯಲ್ಲಿ ಗುರು-ಹಿರಿಯರನ್ನು ಸದಾ ಸ್ಮರಿಸಬೇಕು ಎಂದು ಜಿ.ಪಂ ಸಿಇಒ ಭಂನ್ವರ್ ಸಿಂಗ್ ಮೀನಾ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಸಂತ ಮೈಕಲರ ಶಾಲೆಯಲ್ಲಿ ಭಾನುವಾರ ನಡೆದ ‘ಶಿಕ್ಷಕರ ದಿನಾಚರಣೆ ಮತ್ತು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ’ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮನೆಯೇ ಮೊದಲ ಶಾಲೆ ಎಂಬಂತೆ, ತಾಯಿ ಮೊದಲ ಗುರುವಾದರೆ, ಶಾಲೆಯಲ್ಲಿ ಶಿಕ್ಷಕರು ಮಕ್ಕಳ ಭವಿಷ್ಯವನ್ನು ರೂಪಿಸುತ್ತಾರೆ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಕರಾಗಿ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ. ಉಪ ರಾಷ್ಟ್ರಪತಿಯಾಗಿ, ರಾಷ್ಟ್ರಪತಿಯಾಗಿ ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಶ್ರಮಿಸಿದ್ದಾರೆ ಎಂದು ಅವರು ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಶ್ರೀಧರನ್ ಅವರು ಮಾತನಾಡಿ ಶಿಕ್ಷಕರ ದಿನಾಚರಣೆಯನ್ನು ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹೆಸರಿನಲ್ಲಿ ಆಚರಿಸಲಾಗುತ್ತಿದೆ. ಶಿಕ್ಷಕರಾಗಿ ದುಡಿದ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಆದರ್ಶ ಮತ್ತು ತತ್ವಗಳನ್ನು ಅಳವಡಿಸಿಕೊಳ್ಳುವಂತಾಗಬೇಕು. ಒಬ್ಬ ಶಿಕ್ಷಕರಾಗಿ, ದಾರ್ಶನಿಕರಾಗಿ, ತತ್ವಜ್ಞಾನಿಯಾಗಿ ಬಹು ಎತ್ತರಕ್ಕೆ ರಾಧಕೃಷ್ಣನ್ ಅವರು ಬೆಳೆದರು. ಅವರ ಶ್ರಮ ಎಲ್ಲರಿಗೂ ಮಾದರಿ ಎಂದರು.

ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಎಚ್.ಎಸ್.ಚೇತನ್ ಅವರು ಮಾತನಾಡಿ ಪ್ರಾಥಮಿಕ ಶಾಲಾ ಶಿಕ್ಷಕರು ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಶಿಕ್ಷಣ ನೀಡುತ್ತಾರೆ, ಕೋವಿಡ್‍ನಂತಹ ಆತಂಕದ ಪರಿಸ್ಥಿತಿಯಲ್ಲಿಯೂ ಶಿಕ್ಷಕರು ತಮ್ಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button