ಉತ್ತರ ಕನ್ನಡ

ಯಲ್ಲಾಪುರದಲ್ಲಿ ಪ್ರಕೃತಿಯ ಮುನಿಸು; ಮಳೆಯ ಆರ್ಭಟಕ್ಕೆ ತತ್ತರಿಸಿದ ಕಳಚೆ

ಕಾರವಾರ : ಯಲ್ಲಾಪುರ ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಕಳಚೆ ಗ್ರಾಮವು ಈಗ ಸತ್ಯ ನಾಶವಾಗಿದೆ.ಪ್ರಕೃತಿಯ ಮಡಿಲಲ್ಲಿದ್ದ ಅಪರೂಪದ ತಾಣವೊಂದು ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ಊರಿಗೆ ಊರೇ ಕೊಚ್ಚಿ ಹೋಗಿದೆ. ಮಕ್ಕಳು,ವೃದ್ದರು,ಮಹಿಳೆಯರು ವಾಸಿಸಿದ ಮನೆಯನ್ನು ತೊರೆದು ಈಗ ಬೇರೆ ನೆಲೆಯನ್ನು ಹುಡುಕಬೇಕಾಗಿದೆ.

ಭಾರಿ ಮಳೆಗೆ ಕಳಚೆ ಗ್ರಾಮದ ಸಂಪೂರ್ಣ ಗುಡ್ಡ ಕುಸಿದು ಹೋಗಿದೆ.ಕಳಚೆಯಲ್ಲಿ ಮನೆಗಳು ಪ್ರಕೃತಿಯ ಮುನಿಸಿನಿಂದ ಕಂಗಾಲಾಗಿದೆ.ತೋಟ,ಗದ್ದೆ,ಅರಣ್ಯ ನೆಲಸಮವಾಗಿದೆ.ಜೊತೆಗೆ ವಿದ್ಯುತ್,ಮೊಬೈಲ್, ಬಸ್‌ ಸಂಪರ್ಕ ಸಂಪೂರ್ಣ ಸ್ಥಬ್ದಗೊಂಡಿದೆ.ಇಂದು ಕಳಚೆ ತಲುಪಬೇಕಾದ ಏಕೈಕ ರಸ್ತೆ ಕೈಗಾ – ಇಳಕಲ್ ರಾಜ್ಯ ಹೆದ್ದಾರಿಯು ಭೂ ಕುಸಿತದಿಂದ ಸಂಪರ್ಕ ಕಡಿದುಕೊಂಡು ಹೊಸ ರಸ್ತೆಗೆ ತಯಾರಿ ನಡೆಸುತ್ತಿದ್ದಾರೆ.ಕಳಚೆಯಲ್ಲಿ ಸಂಭವಿಸಿದ ಭೀಕರ ಭೂ ಕುಸಿತದಿಂದ ಕಾಲ್ನಡಿಗೆಯಲ್ಲಿಯೇ ಕ್ರಮಿಸಿದರೂ ಕಳಚೆ ತಲುಪಲಾಗದ ಸ್ಥಿತಿಯಲ್ಲಿದ್ದಾರೆ ಇಲ್ಲಿಯ ಜನ.

ದನ,ಜಾನುವಾರು ಮತ್ತು ಕುಟುಂಬ ಅನಾಥವಾಗಿ ಬಂದು – ಬಳಗದ ಆಶ್ರಯದಲ್ಲಿದ್ದಾರೆ.ಶಾಶ್ವತವಾದ ರಸ್ತೆ ಸಂಪರ್ಕವಿಲ್ಲದೇ,ಬೆಟ್ಟ ಗುಡ್ಡದಿಂದ ಹರಿಯುವ,ಕುಡಿಯುವ ನೀರಿಗೂ ಪರಿತಪಿಸಿ ಹೊರ ಜಗತ್ತಿನ ಸಂಪರ್ಕದಿಂದ ವಂಚಿತರಾಗಿದ್ದಾರೆ.ಕಳೆದ ನಾಲ್ಕು ದಿನಗಳಿಂದ ನರಕಯಾತನೆ ಅನುಭವಿಸುತ್ತಿದ್ದ ಕಳಚೆಯ ಜನರೊಂದಿಗೆ ಅನೇಕರು ಸಹಕರಿಸುತ್ತಿದ್ದಾರೆ.ಹೊರಗಿನಿಂದ ಸ್ವಯಂ ಸೇವಕರಾಗಿ ಸೇವೆಯಲ್ಲಿ ತೊಡಗಿ ಜನರ ಬಳಿ ಸೇವಾ ನಿರತರಾಗಿದ್ದಾರೆ.ನೂರಾರು ಮನೆಗಳಿರುವ ಹಳ್ಳಿಯ ಕುಟುಂಬ,ಕೃಷಿ ಜಮೀನು ಮಣ್ಣು ಪಾಲಾಗಿದೆ. ಶತಮಾನಗಳಿಂದ ಬೆಳೆಸಿದ ಊರು ಈಗ ಅವಶೇಷದಂತೆ ಕಾಣುತ್ತಿದೆ.ಯಾವ ಸಂಪರ್ಕದ ವ್ಯವಸ್ಥೆಯನ್ನೂ ಮಾಡಲಾಗದ ಅಸಹಾಯಕತೆ ಆವರಿಸಿದೆ. ಪರ್ಯಾಯವಾಗಿ ಪುನರ್ವಸತಿಯೇ ದಾರಿಯಾಗಿರುವ ಕಳಚೆಗೆ ಮತ್ತೆ ನೆಲೆ ಕಾಣುವ,ಸಾಗುವಳಿ ಮಾಡುವ ಕನಸು ನನಸಾಗುವುದು.ಕಷ್ಟ ಸಾಧ್ಯವಾಗಿದೆ.

ಹಲವಾರು ಶತಮಾನಗಳ ಇತಿಹಾಸ ಹೊಂದಿರುವ ಕಳಚೆ ಗ್ರಾಮದಲ್ಲಿ ಸರಿ ಸುಮಾರು 300 ಕುಟುಂಬಗಳಿವೆ.1000 ಕ್ಕೂ ಹೆಚ್ಚು ಜನ ಸಂಖ್ಯೆ ಇದೆ..ಈ ಪೈಕಿ ಸರಿ ಸುಮಾರು 600 ಕ್ಕೂ ಮಿಕ್ಕಿದ ಜನರ ಪರಿಸ್ಥಿತಿ ಇಂದಿಗೂ ದಾರುಣವಾಗಿದೆ. ಬಿರುಕು ಬಿಟ್ಟು ಈಗಲೋ ಆಗಲೋ ಎನ್ನುತ್ತಿರುವ ಮನೆ,ಪ್ರಕೃತಿಯ ಮುನಿಸಿಗೆ ಧರೆಗೆ ಉರುಳಿದ ಅನ್ನ ನೀಡುವ ಅಡಿಕೆ – ತೆಂಗು ಇದರ ನಡುವೇ ಸ್ವಾರ್ಥವೇ ಇಲ್ಲದೆ ಇರುವ ಮೂಖ ಪ್ರಾಣಿಗಳನ್ನು ಎಲ್ಲಿಗೆ ಕೊಂಡೊಯ್ಯಲಿ ಎನ್ನುತ್ತಾ ಕೊರಗುತ್ತಿರುವ ಅಲ್ಲಿನ ಜನತೆಯ ಸ್ಥಿತಿ.ಆದರೂ ಇದುವರೆಗೂ ಎಲ್ಲಿಯೂ ಗಂಜಿಕೇಂದ್ರ,ತಾತ್ಕಾಲಿಕ ವಸತಿಗೆ ತಾಲೂಕಾಡಳಿತ ಯಾವುದೇ ವ್ಯವಸ್ಥೆ ಕಲ್ಪಿಸಿಲ್ಲ ಎನ್ನುವುದು ದುರದೃಷ್ಟಕರ.

ಸಿಗಬೇಕಿದೆ ಸರಕಾರದಿಂದ ಸೂಕ್ತ ಪರಿಹಾರ

ಕಳಚೆಯಲ್ಲಿ ತಾಲೂಕಿನಲ್ಲೇ ಹಿಂದೆಂದು ಕಂಡರಿಯದ ವ್ಯಾಪಕ ಭೂ ಕುಸಿತ ಕಂಡಿದೆ.ಇಲ್ಲಿರುವ ನೂರಾರು ಎಕರೆ ಅಡಿಕೆ – ತೆಂಗಿನ ತೋಟ ನೆಲಸಮವಾಗಿದೆ. ಅದೇಷ್ಟೋ ಮನೆ ಕೊಟ್ಟಿಗೆಗಳು ಮುರಿದು ಬಿದ್ದಿದೆ.ಅಡಿಕೆ – ತೆಂಗು ಇಲ್ಲಿನ ಪ್ರಮುಖ ಬೆಳೆಯಾಗಿದ್ದು,ಇದರಿಂದ ಇಲ್ಲಿನ ಜನತೆ ಜೀವನ ನಡೆಸುವುದರ ಜೊತೆಗೆ ಸಾವಿರಾರು ಜನರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗವೂ ದೊರಕಿತ್ತು.ಕೃಷಿಯಿಂದಲೇ ಬದುಕನ್ನು ಕಟ್ಟಿ ಕೊಂಡಿದ್ದರು.ಈಗಾಗಲೆ ಅದೇಷ್ಟೋ ಮಂದಿ ಮನೆ,ಮಠಗಳನ್ನು ತೋಟ – ಗದ್ದೆಗಳನ್ನು ಕಳೆದುಕೊಂಡು ನೂರಾರು ಜನರಿಗೆ ಊಟ ಕೊಡುವ ಕೈಗಳು ಪ್ರಕೃತಿ ವಿಕೋಪದಿಂದಾಗಿ ತುತ್ತು ಊಟಕ್ಕೂ ಕೈ ಒಡ್ಡಬೇಕಾಗಿದೆ.ಅವರ ಜಮೀನಿನಲ್ಲಿ ಮತ್ಯಾವ ಬೆಳೆಯೂ ಬೆಳೆಯಲಾಗದ ರೀತಿಯಲ್ಲಿ ಭೂ ಕುಸಿತ ಉಂಟಾಗಿದ್ದು,ತಕ್ಷಣ ನೊಂದವರಿಗೆ ಪರಿಹಾರ ನೀಡಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button