ಗೋಕರ್ಣ: ಸಮುದ್ರದ ಸುಳಿಯಲ್ಲಿ ಸಿಲುಕಿದ ಪ್ರವಾಸಿಗನ ರಕ್ಷಣೆ

ಕಾರವಾರ : ಸಮುದ್ರದಲ್ಲಿ ಈಜಲು ತೆರಳಿ ನೀರಿನ ಸುಳಿಯಲ್ಲಿ ಸಿಕ್ಕು ಒದ್ದಾಡುತ್ತಿದ್ದ ವ್ಯಕ್ತಿಯೋರ್ವನನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ ಘಟನೆ ಗೋಕರ್ಣದ ಓಂಬೀಚ್ ಕಡಲ ತೀರದಲ್ಲಿ ನಡೆದಿದೆ.
ಆಂದ್ರಪ್ರದೇಶದ ಅನಂತಪುರ ಜಿಲ್ಲೆಯ ಪ್ರಸಾದ ಎಂಬವರೇ ಲೈಫ್ ಗಾರ್ಡ್ ಸಿಬ್ಬಂದಿಯಿಂದ ರಕ್ಷಣೆಗೆ ಒಳಗಾದವರು.ಪ್ರಸಾದ ಸೇರಿ ಒಟ್ಟು ಎಂಟು ಜನರು ತಮ್ಮ ಖಾಸಗಿ ವಾಹನದಲ್ಲಿ ಗೋಕರ್ಣ ಪ್ರವಾಸಕ್ಕೆ ಆಗಮಿಸಿದ್ದರು ಎನ್ನಲಾಗಿದ್ದು, ಇಂದು ಓಂಬೀಚ್ ಗೆ ತೆರಳಿ ಸಮುದ್ರದಲ್ಲಿ ಈಜಲು ತೆರಳಿದ ವೇಳೆ ಈ ಅವಘಡ ಸಂಭವಿಸಿದೆ.
ಪ್ರಸಾದ ಎಂಬ ಯುವಕ ನೀರಿನ ಸುಳಿಯಲ್ಲಿ ಸಿಲುಕಿ ಸಮುದ್ರದ ರಕ್ಕಸ ಅಲೆಗೆ ಕೊಚ್ಚಿ ಹೋಗುವ ಸಂದರ್ಭದಲ್ಲಿ ರವಿ ನಾಯ್ಕ ನೇತೃತ್ವದ ಲೈಫ್ ಗಾರ್ಡ್ ಸಿಬ್ಬಂದಿ ಕೂಡಲೇ ಸಮುದ್ರಕ್ಕೆ ಧುಮುಕಿ,ಯುವಕನನ್ನು ರಕ್ಷಿಸಿ ದಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಸಾದ ಅವರಿಗೆ ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಪ್ರವಾಸಿಗ ಪ್ರಸಾದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.




