ಉತ್ತರ ಕನ್ನಡಜಿಲ್ಲಾ ಸುದ್ದಿ

ಮಹಿಳಾ ಸರಕಾರಿ ನೌಕರರಿಗೆ ಮಕ್ಕಳ ಆರೈಕೆ ಸವಾಲು : ಉತ್ತರ ಕನ್ನಡ ಜಿ.ಪಂ.ಹೊಸ ಪ್ಲ್ಯಾನ್​​​ !

ಕಾರವಾರ : ಮಹಿಳಾ ಸರ್ಕಾರಿ ನೌಕರರಿಗೆ ಕರ್ತವ್ಯದ ಅವಧಿಯಲ್ಲಿ ಕೆಲಸ ಮತ್ತು ಮಕ್ಕಳ ಆರೈಕೆ ಎರಡನ್ನೂ ನಿಭಾಯಿಸುವುದು ಒಂದು ಸವಾಲು. ಇದರಿಂದ ಅವರ ಕೆಲಸದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲಾ ಪಂಚಾಯತಿ ಕಛೇರಿ ಆವರಣದಲ್ಲಿ ಶಿಶು ಪಾಲನಾ ಕೇಂದ್ರ ಸ್ಥಾಪನೆ ಮಾಡಲಾಗಿದ್ದು, ನೌಕರರ ಕೆಲಸವೂ ಈಗ ವೇಗ ಪಡೆದುಕೊಂಡಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೀಗ ಮಹಿಳಾ ಸಿಬ್ಬಂದಿಯ ಮಕ್ಕಳನ್ನು ಪಾಲನೆ ಮಾಡಲು ಜಿಲ್ಲಾ ಪಂಚಾಯತಿ ಕಛೇರಿಯಲ್ಲಿಯೇ ಇದೀಗ ಸರ್ಕಾರಿ ಆದೇಶದಂತೆ ಬಾಲಭವನವನ್ನು ತೆರೆಯಲಾಗಿದೆ. ಜೊತೆಗೆ ಮಹಿಳೆಯರಿಗೆ ಹಾಗೂ ಪುರುಷರಿಗೆ ರೆಸ್ಟ್ ರೂಮ್ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಕಛೇರಿಯಲ್ಲಿ ಚಿಕ್ಕ ಮಕ್ಕಳನ್ನು ಹೊಂದಿರುವ ನೌಕರರು ತಮ್ಮ ಮಕ್ಕಳ ಬಗ್ಗೆ ಯೋಚನೆ ಇಲ್ಲದೇ ಕೆಲಸ ಮಾಡಬಹುದಾಗಿದ್ದು, ಇದೀಗ ಇವರ ಉತ್ತಮ ಕೆಲಸದ ನಿರೀಕ್ಷೆಯನ್ನು ಜಿಲ್ಲಾ ಪಂಚಾಯತಿ ಸಿಇಒ ಅಪೇಕ್ಷಿಸಿದ್ದಾರೆ.

ಸದ್ಯ ಜಿಲ್ಲಾ ಪಂಚಾಯತಿ ಆವರಣದಲ್ಲಿ ಮಹಿಳಾ ಸಿಬ್ಬಂದಿ ಮಕ್ಕಳ ಪೋಷಣೆಗೆ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಇದೀಗ ತಾಲೂಕು ಕೇಂದ್ರದಲ್ಲೂ ಸಹ ಶೀಘ್ರದಲ್ಲಿ ವ್ಯವಸ್ಥೆ ಕಲ್ಪಿಸುವ ಕಾರ್ಯ ನಡೆದಿದೆ. ಸದ್ಯ ಹೆಚ್ಚು ಮಹಿಳೆಯರಿರುವ ಕಛೇರಿಯಲ್ಲಿ ಇದೀಗ ನೌಕರರ ಮಕ್ಕಳ ಪೋಷಣೆಗೆ ಶಿಶುಪಾಲನಾ ಕೇಂದ್ರ ಹಾಗೂ ಮಹಿಳೆಯರಿಗೆ ವಿಶ್ರಾಂತಿ ಗೃಹ ವ್ಯವಸ್ಥೆ ಮಾಡಲಾಗಿದೆ.

ಮಕ್ಕಳನ್ನು ಆಕರ್ಷಿಸಲು ಬಣ್ಣ ಬಣ್ಣದ ಚಿತ್ತಾರ ಹಾಗೂ ವಿವಿಧ ಆಟಿಕೆಗಳಿದ್ದರೆ, ಮಹಿಳಾ ಸಿಬ್ಬಂದಿಗಾಗಿ ಆಸನ, ರೆಫ್ರಿಜಿರೇಟರ್,ಚಿಕ್ಕ ಪುಟ್ಟ ಅಡುಗೆ ಮಾಡಿಕೊಳ್ಳಲು ಸಹ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದಾಗಿ ತಮಗೆ ಅನುಕೂಲವಾಗಿದೆ. ಮಹಿಳೆಯರಿಗೆ ಹಲವು ಸಮಸ್ಯೆ ಇರುತ್ತೆ, ಅಂತಹ ಸಮಸ್ಯೆಯಲ್ಲಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಈಗ ಎಲ್ಲಾ ರೀತಿಯ ವ್ಯವಸ್ಥೆಯನ್ನು ಕಛೇರಿಯಲ್ಲಿಯೇ ಕಲ್ಪಿಸಿಕೊಟ್ಟಿದ್ದು ಸಹಾಯವಾಗಿದೆ ಎಂಬುದು ಇಲ್ಲಿನ ನೌಕರರ ಮಾತು.

ಪುಟ್ಟ ಮಕ್ಕಳು ತಂದೆ,ತಾಯಿ ಕಣ್ಣ ಮುಂದೆಯೇ ಇರಬೇಕು ಎಂದು ಬಯಸುತ್ತಾರೆ. ಶಿಶುಪಾಲನಾ ಕೇಂದ್ರ ಸಿದ್ಧಗೊಂಡಿರುವ ಕಾರಣ ಜಿಲ್ಲಾ ಪಂಚಾಯತಿಯ ನೌಕರರಿಗೆ ಇನ್ನುಮುಂದೆ ಆ ಚಿಂತೆ ಕಡಿಮೆಯಾಗಲಿದೆ. ಇದರೊಂದಿಗೆ ಪುರುಷ ಮತ್ತು ಮಹಿಳಾ ನೌಕರರಿಗೆ ವಿಶ್ರಾಂತಿ ಕೊಠಡಿಯೂ ಇದ್ದು, ನೌಕರರಿಗೂ ಸಹ ಮತ್ತಷ್ಟು ಕೆಲಸ ಮಾಡಲು ಉತ್ತೇಜಿಸಿದಂತಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button