ಉತ್ತರ ಕನ್ನಡ
ಜೋಯ್ಡಾದ ಸಿದ್ಧೇಶ್ವರ ಕೆರೆಯಲ್ಲಿ ಮೀನುಗಳ ಸಾವು

ಕಾರವಾರ : ಜೋಯಿಡಾ ತಾಲೂಕಿನ ಸಿದ್ದೇಶ್ವರ ಕೆರೆಯಲ್ಲಿ ನೂರಕ್ಕೂ ಹೆಚ್ಚು ದೊಡ್ಡ ಗಾತ್ರದ ಮೀನುಗಳು ಯಾವುದೋ ರೋಗದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಈ ಮೀನುಗಳ ಅಸ್ವಾಭಾವಿಕ ಸಾವಿನ ಕಾರಣ ಪತ್ತೆಹಚ್ಚಬೇಕಾಗಿದೆ.
ಜೋಯಿಡಾದ ದೊಡ್ಡ ಕೆರೆಯಾದ ಸಿದ್ದೇಶ್ವರ ಕೆರೆ ಯಾವಾಗಲೂ ನೀರಿನಿಂದ ತುಂಬಿರುತ್ತದೆ. ವನ್ಯಜೀವಿಗಳ ಬಾಯಾರಿಕೆ ತಣಿಸುವ ಜೊತೆಗೆ ನೂರಾರು ವಿವಿಧ ಪ್ರಭೇದದ ಪಕ್ಷಿಗಳ ಆವಾಸ ತಾಣವಾಗಿದೆ.ಈ ಕೆರೆಗೆ ವಿವಿಧ ಕಡೆಯಿಂದ ವಲಸೆ ಬಂದ ಪಕ್ಷಿಗಳು ಸಹ ಪ್ರತಿ ವರ್ಷ ಕಾಣಸಿಗುತ್ತದೆ.
ಕಳೆದ ಮೂರು ದಿನಗಳಿಂದ ಮೂರರಿಂದ ನಾಲ್ಕು ಕೆ.ಜಿ.ಗಾತ್ರದ ನೂರಾರು ಮೀನುಗಳು ಸಾವನ್ನಪ್ಪಿ ಕೆರೆಯಲ್ಲಿ ತೇಲುತ್ತಿರುವುದು ಕಂಡುಬರುತ್ತಿದೆ.ಈ ಮೀನುಗಳ ಸಾವಿನ ಕಾರಣ ಪತ್ತೆ ಮಾಡಿ ಇಲ್ಲಿನ ಪರಿಸರದ ಜೊತೆಗೆ ಅಪರೂಪದ ಪಕ್ಷಿ ಸಂಕುಲಕ್ಕೂ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗಿದೆ.




