ನಾಳೆಯಿಂದ ಶಾಂತಿಯುತವಾಗಿ ಶಾಲೆಗಳು ಆರಂಭ : ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ನಾಳೆಯಿಂದ ಫ್ರೌಡ ಶಾಲೆಗಳನ್ನ ಆರಂಭ ಮಾಡುತ್ತೇವೆ. ಈಗಾಗಲೇ ಜಿಲ್ಲಾಧಿಕಾರಿಗಳು ಸೇರಿ ಶಾಲಾ ಆಡಳಿತ ಮಂಡಳಿಗಳಿಗೆ ಗಲಾಟೆ ಆಗದಂತೆ ನೋಡಿಕೊಳ್ಳಲು ತಿಳಿಸಲಾಗಿದೆ. ಜೊತೆಗೆ ಗಲಾಟೆ ನಡೆಯಬಹುದಾದ ಶಾಲೆಗಳ ಬಗ್ಗೆ ಗಮನ ಹರಿಸಿ, ಶಾಂತಿ ಸಭೆ ಮಾಡಲು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ವ್ಯವಸ್ಥೆಯನ್ನು ನೋಡಿಕೊಂಡು ನಂತರ ಕಾಲೇಜುಗಳ ಆರಂಭದ ಬಗ್ಗೆ ಶಿಕ್ಷಣ ಸಚಿವರು ವರದಿಯನ್ನ ತರಿಸಿಕೊಂಡು ನಿರ್ಧರಿಸುತ್ತೇವೆ. ಮೊದಲಿನ ಹಾಗೇ ಸೌರ್ಹದಯುತವಾಗಿ ಶಾಲಾ ಕಾಲೇಜುಗಳನ್ನ ಆರಂಭಿಸುತ್ತೆವೆ. ಶಾಲಾ ಕಾಲೇಜುಗಳನ್ನ ಆರಂಭಿಸುವುದು ನಮ್ಮ ಮೊದಲ ಆಧ್ಯತೆಯಾಗಿದೆ. ಮಾರ್ಚ್ ಏಪ್ರಿಲ್ ತಿಂಗಳಲ್ಲಿ ವಿದ್ಯಾರ್ಥಿಗಳ ಪರೀಕ್ಷೆ ನಡೆಯಲಿವೆ. ಹಾಗಾಗಿ ವಿದ್ಯಾರ್ಥಿಗಳು ವಿಧ್ಯಾಭ್ಯಾಸ ಕಡೆ ಗಮನ ಹರಿಸಬೇಕು ಎಂದರು.
ಇದೇ ವೇಳೆ ಹಿಜಾಬ್ ವಿಚಾರದಲ್ಲಿ ವಿವಾದ ಸೃಷ್ಟಿಸುವವರ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಯಾರು ಪ್ರಚೋದನೆ ನೀಡ್ತಾರೆ, ಸೋಷಿಯಲ್ ಮೀಡಿಯಾದಲ್ಲಿ ಸಂದೇಶವನ್ನ ಹಾಕ್ತಾರೆ. ಅವೆಲ್ಲವನ್ನೂ ನಮ್ಮ ಪೊಲೀಸ್ ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅಗತ್ಯ ಬಿದ್ದಲ್ಲಿ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.



