ಗೃಹಿಣಿ ಸರ ಕಿತ್ತು ಪರಾರಿಯಾಗುತ್ತಿದ್ದ ದರೋಡೆಕೋರರು ಒಂದೇ ಗಂಟೆಯಲ್ಲೇ ಸೆರೆ ಸಿಕ್ಕಿದ್ದು ಹೇಗೆ..?

ದಾವಣಗೆರೆ: ದರೋಡೆ ಮಾಡಿದ ಒಂದೇ ಗಂಟೆಯಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಕುದುರೆ ಗ್ರಾಮದಲ್ಲಿ ನಡೆದಿದೆ. ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸುಮಾರು 80 ಸಾವಿರ ರೂಪಾಯಿ ಮೌಲ್ಯದ 15 ಗ್ರಾಂ ತೂಕದ ಬಂಗಾರದ ಸರ ಹಾಗೂ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಕ್ರೂಸರ್ ವಾಹನ, ಮೂರು ಲಾಂಗ್ ಹಾಗೂ ಮೂರು ಪಿಸ್ತೂಲ್ ಅನ್ನು ವಶಪಡಿಸಿಕೊಂಡಿದ್ದಾರೆ.
ಶ್ರೀಗೌರಸಂದ್ರದ ಮಾರಮ್ಮ ದೇವಸ್ಥಾನಕ್ಕೆ ನಲ್ಕುದುರೆ ಗ್ರಾಮದ ರೂಪಾ ಎಂಬುವವರು ಹೋಗಿ ಪೂಜೆ ಸಲ್ಲಿಸಿ ವಾಪಸ್ ಬರುವಾಗ ಹಿಂಬದಿಯಿಂದ ದಾಳಿ ನಡೆಸಿದ ಎಂಟು ಜನರು ಚಾಕು ತೋರಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿದ್ದರು. ದೇವಸ್ಥಾನದ ಸಮೀಪದಲ್ಲಿಯೇ ಬಿಳಿ ಬಣ್ಣದ ಕ್ರೂಜರ್ ವಾಹನ ನಿಲ್ಲಿಸಿದ್ದ ದರೋಡೆಕೋರರು ರೂಪಾ ಅವರು ದೇವಸ್ಥಾನದಿಂದ ಸ್ವಲ್ಪ ದೂರ ಬರುತ್ತಿದ್ದಂತೆ ಅಟ್ಯಾಕ್ ಮಾಡಿದ್ದರು. ಈ ವೇಳೆ ಪತ್ನಿ ನೆರವಿಗೆ ಬಂದ ಯತೀಶ್ ಮೇಲೂ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದರು. ಹಲ್ಲೆಗೊಳಗಾದ ಯತೀಶ್ ಕಾರನ್ನು ಬೈಕ್ ಮೂಲಕ ಹಿಂಬಾಲಿಸಿಕೊಂಡು ಹೋಗುವಾಗ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಒಂದು ಗಂಟೆ ಅವಧಿಯಲ್ಲಿ ದರೋಡೆಕೋರರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.
ಚನ್ನಗಿರಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಸಂತೋಷ್ ಮಾರ್ಗದರ್ಶನದಂತೆ ಪೊಲೀಸ್ ಇನ್ ಸ್ಪೆಕ್ಟರ್ ಮಧು, ಸಂತೇಬೆನ್ನೂರು ಪಿಎಸ್ಐ ಶಿವರುದ್ರಪ್ಪ ಎಸ್. ಮೇಟಿ ಹಾಗೂ ಸಂತೇಬೆನ್ನೂರು ಪೊಲೀಸ್ ಠಾಣೆಯ ಸಿಬ್ಬಂದಿಯಾದ ಓಂಕಾರಪ್ಪ, ಮೈಲಾರಪ್ಪ, ಹಮೀದ್, ಯೋಗೇಶ್, ರುದ್ರಪ್ಪ, ಅಶೋಕ್ ರೆಡ್ಡಿ, ಕೊಟ್ರೇಶ್, ಮಂಜುನಾಥ್, ಪ್ರಹ್ಲಾದ್, ಸಂತೋಷ್ ಮತ್ತಿತರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.




