Farm Laws: ಮೂರು ಕೃಷಿ ಕಾಯ್ದೆ ರದ್ದುಗೊಳಿಸುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅಸ್ತು

ನವದೆಹಲಿ: ಮೂರು ಕೃಷಿ ತಿದ್ದುಪಡಿ ವಾಪಸ್ ಪಡೆಯಲು ಸಂಬಂಧಪಟ್ಟಂತೆ ಕೇಂದ್ರ ಸಚಿವ ಸಂಪುಟ ಗ್ರೀನ್ ಸಿಗ್ನಲ್ ನೀಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾದ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಕರಡು ಶಾಸನಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಸರ್ಕಾರವು ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನೆ ಮತ್ತು ಅನುಕೂಲ) ಕಾಯಿದೆ, 2020, ರೈತರ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ ಒಪ್ಪಂದ, ಕೃಷಿ ಸೇವೆಗಳ ಕಾಯಿದೆ 2020ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯಿದೆ, 2020 ಅನ್ನು ರದ್ದುಗೊಳಿಸಲಾಗಿದೆ. ಈ 27 ಹೊಸ ಮಸೂದೆಗಳನ್ನು ಈಗ ನವೆಂಬರ್ 29 ರಿಂದ ಪ್ರಾರಂಭವಾಗುವ ಸಂಸತ್ತಿನ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಪರಿಚಯಿಸಲಾಗುವುದು.
ಗುರುಪುರಬ್ ಸಂದರ್ಭದಲ್ಲಿ ಮೂರು ವಿವಾದಾಸ್ಪದ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಘೋಷಣೆಯನ್ನು ಪ್ರಧಾನಿ ಮಾಡಿದರು. ರಾಷ್ಟ್ರದ ಹಿತದೃಷ್ಟಿಯಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಪ್ರಧಾನಿ ಮೋದಿ ಹೇಳಿದರು.
