ಜಗಳೂರಿನಲ್ಲಿ ಶಾಲಾ ಬಸ್ ಅಪಘಾತ: ಅಪಾಯದಿಂದ ಪಾರಾದ ಮಕ್ಕಳು..!

ದಾವಣಗೆರೆ: ಜಗಳೂರು ತಾಲೂಕಿನ ಹಾಲೇಹಳ್ಳಿ ಗ್ರಾಮದ ಕ್ರಾಸ್ ಬಳಿ ಎಸ್.ಕೆ.ಓ.ಟಿ ಮೆಮೋರಿಯಲ್ ಸ್ಕೂಲ್ ಬಸ್ ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಿರೆಮಲ್ಲನಹೊಳೆ ಗೊಲ್ಲರಹಟ್ಟಿ ಗ್ರಾಮದ ಬಳಿ ಇರುವ ಎಸ್.ಕೆ.ಓ.ಟಿ ಮೆಮೋರಿಯಲ್ ಸ್ಕೂಲ್ ಗೆ ಸೇರಿದ ಶಾಲಾವಾಹನ ಹಾಲೇಹಳ್ಳಿ ಗ್ರಾಮದ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಹೊಲದ ಏರಿಗೆ ಹೊಡೆದಿದೆ. ಬಳಿಕ ಬಸ್ಸಿನಲ್ಲಿದ್ದ ಸುಮಾರು ನಾಲ್ಕರಿಂದ ಐದು ಮಕ್ಕಳಿಗೆ ತೀವ್ರವಾಗಿ ಪೆಟ್ಟಾಗಿದ್ದು, ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಶಾಲೆಗೆ ಮಕ್ಕಳನ್ನು ಕರೆದುಕೊಂಡು ಹೋಗಲು ಒಂದೇ ಒಂದು ಸ್ಕೂಲ್ ಬಸ್ ಇದೆ. ಇದರಿಂದಾಗಿ ಸುಮಾರು ನಾಲ್ಕರಿಂದ ಐದು ಹಳ್ಳಿಗಳಿಂದ ಮಕ್ಕಳನ್ನು ಕರೆದುಕೊಂಡು ಬರಲಾಗುತ್ತಿದೆ. ಚಾಲಕ ಶಾಲಾ ಸಮಯಕ್ಕೆ ಹೊಂದಿಸುವ ಒತ್ತಡ ಇರೋ ಕಾರಣಕ್ಕೆ ವೇಗವಾಗಿ ವಾಹನ ಓಡಿಸುತ್ತಾನೆ. ಹೀಗಾಗಿಯೇ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಶಾಲೆಯ ವಾಹನವು ಬೆಳಿಗ್ಗೆ ಮತ್ತು ಸಂಜೆಯ ಹೊತ್ತಿನಲ್ಲಿ ಬಸ್ ವೇಗವಾಗಿ ಹೋಗುತ್ತಿರುವುದನ್ನು ಜನರು ಗಮನಿಸಿದ್ದು, ಈ ಬಗ್ಗೆ ಶಾಲಾ ಆಡಳಿತ ಮಂಡಳಿ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿರಲಿಲ್ಲ ಎಂದು ಆರೋಪಿಸಿರುವ ಸ್ಥಳೀಯರು ಚಾಲಕನ ಅಜಾಗರೂಕತೆಯಿಂದಾಗಿಯೇ ಈ ಅಪಘಾತ ಸಂಭವಿಸಿದೆ. ನುರಿತ ಚಾಲಕನನ್ನು ನೇಮಿಸಬೇಕು. ಶಾಲೆಗೆ ಮಕ್ಕಳನ್ನು ಕರೆದುಕೊಂಡು ಬರಲು ಹೆಚ್ಚುವರಿ ವಾಹನ ಓಡಿಸಬೇಕು ಎಂದು ಆಗ್ರಹಿಸಿದ್ದಾರೆ.




