ಪೊಲೀಸರ ವಶದಲ್ಲಿದ್ದ ವ್ಯಕ್ತಿ ಸಾವು ಪ್ರಕರಣದ ತನಿಖೆ ಆರಂಭಿಸಿದ ಸಿಐಡಿ: ಇಬ್ಬರು ಪೊಲೀಸ್ ಅಧಿಕಾರಿಗಳ ಅಮಾನತು…!

ದಾವಣಗೆರೆ: ಪೊಲೀಸರ ವಶದಲ್ಲಿದ್ದ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ. ಪ್ರಕರಣ ಸಂಬಂಧ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಇನ್ನು ಕುಮಾರನ ಸಾವಿನ ಹಿನ್ನೆಲೆಯಲ್ಲಿ ಸಿಇಎನ್ ಇನ್ಸ್ಪೆಕ್ಟರ್ ಬಿ. ವಿ. ಗಿರೀಶ್ ಹಾಗೂ ಸಬ್ ಇನ್ಸ್ಪೆಕ್ಟರ್ ಮೇಘರಾಜ್ ಅವರನ್ನು ಅಮಾನತು ಮಾಡಿ ಪೂರ್ವ ವಲಯದ ಐಜಿಪಿ ಎಸ್. ರವಿ ಆದೇಶ ಹೊರಡಿಸಿದ್ದಾರೆ. ಸಿಐಡಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನೇತೃತ್ವದ ತಂಡ ದಾವಣಗೆರೆಗೆ ಆಗಮಿಸಿದ್ದು ತನಿಖೆ ಆರಂಭಿಸಿದೆ. ಸಿಐಡಿ ಡಿವೈಎಸ್ಪಿ ಹಾಗೂ ಇನ್ಸ್ಪೆಕ್ಟರ್ ಸಹ ಈ ತಂಡದಲ್ಲಿದ್ದು, ಘಟನೆ ಸಂಬಂಧ ಸಾಕ್ಷ್ಯ ಕಲೆಹಾಕುತ್ತಿದೆ.
ದಾವಣಗೆರೆ ನಗರದ ಶ್ರೀಲಾಡ್ಜ್ ನಲ್ಲಿ ಸಿಇಎನ್ ಪೊಲೀಸರ ವಶದಲ್ಲಿದ್ದ ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಬಳಿಯ ಬಹದ್ದೂರ್ ಘಟ್ಟ ನಿವಾಸಿ ಕುಮಾರ್ ಸಾವನ್ನಪ್ಪಿದ್ದರು. ಈ ಸಾವಿಗೆ ಕಾರಣರಾದ ಆರೋಪದ ಮೇಲೆ ಪೊಲೀಸ್ ಅಧಿಕಾರಿಗಳನ್ನು ಬಂಧಿಸಬೇಕು. ಮೃತನ ಕುಟುಂಬದ ಸದಸ್ಯರಿಗೆ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಮೃತನ ಸಂಬಂಧಿಕರು, ಡಿಎಸ್ಎಸ್ ಮುಖಂಡರು ಚಿಗಟೇರಿ ಜಿಲ್ಲಾಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದರು.
ಸ್ವಯಂ ದೂರು ದಾಖಲಿಸಿಕೊಂಡ ಪೊಲೀಸ್ರು…!
ಇನ್ನು ಮೃತ ಕುಮಾರನ ಸಂಬಂಧಿಕರಾಗಲೀ, ಸ್ನೇಹಿತರಾಗಲೀ, ಸಂಘಟನೆಯ ಸದಸ್ಯರು ದೂರು ನೀಡಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರೇ ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ. ರಿಷ್ಯಂತ್ ಸ್ಪಷ್ಟಪಡಿಸಿದ್ದಾರೆ. ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಸುಮೋಟೊ ಕೇಸ್ ದಾಖಲಾಗಿದೆ.




