ಶ್ರೀಗಂಧ ಸ್ಮಗ್ಲಿಂಗ್ ಬೇಧಿಸಿದ ಪೊಲೀಸರು 1 ಕೋಟಿ ಮೌಲ್ಯದ ಶ್ರೀಗಂಧ ವಶಕ್ಕೆ

ಮೈಸೂರು: ಶ್ರೀಗಂಧದ ಸ್ಮಗ್ಲಿಂಗ್ ಜಾಲ ಬೇಧಿಸಿರುವ ಸಿಸಿಬಿ ಪೊಲೀಸರು 1 ಕೋಟಿ ರೂ. ಮೌಲ್ಯದ 700 ಕೆಜಿ ಶ್ರೀಗಂಧ, 15 ಸಾವಿರ ಹಣ, 1 ಗೂಡ್ಸ್ ಕ್ಯಾರಿಯರ್ ವಾಹನ, ಎರಡು ಮೊಬೈಲ್ ಫೋನ್ ವಶಕ್ಕೆ ಪಡೆದುಕೊಂಡು ಇಬ್ಬರನ್ನು ಬಂಧಿಸಿದ್ದಾರೆ.
ಮೈಸೂರು ನಗರದ ಮಂಡಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಮಂಡಿ ಮೊಹಲ್ಲಾದ ಪುಲಕೇಶಿ ರಸ್ತೆ & ಎಂಕೆಡಿಕೆ ರಸ್ತೆಯ 2ನೇ ಕ್ರಾಸ್ ಸೇರುವ ಸ್ಥಳದಲ್ಲಿ ಟಾಟಾ ಗೂಡ್ಸ್ ಕ್ಯಾರಿಯರ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಶ್ರೀಗಂಧದ ಮರದ ತುಂಡುಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮೈಸೂರಿನ ಸ್ಮಗ್ಲರ್ ಒಬ್ಬರಿಂದ ಶ್ರೀಗಂಧದ ಮರದ ತುಂಡು ಖರೀದಿಸಿಕೊಂಡು ಬೆಂಗಳೂರಿನ ಕಡೆಗೆ ಸಾಗಾಣಿಕೆ ಮಾಡಲು ತೆರಳುತ್ತಿದ್ದಾಗ ಗುಪ್ತ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರು ದಾಳಿ ನಡೆಸಿ, ದಂಧೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಬಿಯಲ್ಲಿ ತನಿಖೆ ಮುಂದುವರೆದಿದೆ. ಸ್ಮಗ್ಲಿಂಗ್ ದಂಧೆಯಲ್ಲಿ ಭಾಗಿಯಾಗಿರುವ ಇತರೇ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆದಿದೆ.




