Latestರಾಮನಗರ

ರೇಷ್ಮೆನಗರಿಯಲ್ಲಿ ದಿಗಿಲು ಮೂಡಿಸುತ್ತಿದೆ ಗಾಂಜಾ ದಂಧೆ!

ರಾಜೇಶ್ ಕೊಂಡಾಪುರ

ರಾಮನಗರ: ರೇಷ್ಮೆ ನಗರಿ ರಾಮನಗರದಲ್ಲಿ ಗಾಂಜಾ ಪರಿಮಳ ವ್ಯಾಪಕವಾಗುತ್ತಿದೆ. ಕೆಲ ತಿಂಗಳು ನಿಯಂತ್ರಣಕ್ಕೆ ಬಂದಿದ್ದ ಗಾಂಜಾ ಘಮಲು ದಂಧೆಯಾಗಿ ವಿಸ್ತರಣೆಯಾಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ದಿಗಿಲು ಮೂಡಿಸಿದೆ.

ಕೊರೋನಾ ಹಾವಳಿಯಿಂದ ಬಹುತೇಕ ಉದ್ಯಮಗಳಿಗೆ ಗರ ಬಡಿದಿದ್ದರೆ, ಮಾದಕ ಜಗತ್ತು ಮಾತ್ರ ಸದ್ದಿಲ್ಲದೆ ಹೊಳಪು ತಂದುಕೊಂಡಿದೆ.

ಇದಕ್ಕೆ ಕಾರಣ ಕೊರೋನಾ ಶುರುವಾದ ಬಳಿಕ ಜಿಲ್ಲೆಯಲ್ಲಿ ಮಾದಕ ವಸ್ತು ಮಾರಾಟ ದಂಧೆ ವ್ಯಾಪಗೊಂಡಿದ್ದು, ಇದರಲ್ಲಿ ಯುವಕರು ಹೆಚ್ಚು ಸಕ್ರಿಯವಾಗುತ್ತಿರುವುದು. ಇಂತಹದ್ದೊಂದು ಆತಂಕಕಾರಿ ಸಂಗತಿ ಇತ್ತೀಚೆಗೆ ಗಾಂಜಾ ವಿರುದ್ಧದ ಕಾರ್ಯಾಚರಣೆ ವೇಳೆ ಪೊಲೀಸರಿಗೆ ಗೋಚರಿಸಿದೆ.

ಕೊರೋನಾ ಹೊಡೆತಕ್ಕೆ ಸಿಲುಕಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕೆಲ ನಿರುದ್ಯೋಗಿಗಳು ಮಾದಕ ಲೋಕದಲ್ಲಿ ಉದ್ಯೋಗ ಅರಸಿದ್ದಾರೆ‌ ಎನ್ನುವ ಸುಳಿವು ಕೂಡ ಪೊಲೀಸರಿಗೆ ದೊರೆತಿದೆ. ಕೊರೋನಾ ಕಾಲದಲ್ಲಿ ಗಾಂಜಾ ವೃದ್ಧಿಗೆ ಉದ್ಯೋಗ ನಷ್ಟವೂ ಪ್ರಮುಖ ಕಾರಣವಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಆದರೆ, ನೇರವಾಗಿ ಒಪ್ಪಿಕೊಳ್ಳದ ಪೊಲೀಸರು, ಹಣದಾಸೆಗೆ ಕೃತ್ಯಕ್ಕೆ ಸಹಕರಿಸಿಬಹುದು ಎನ್ನುವ ಶಂಕೆಯಂತೂ ಮೂಡಿದೆ.

ಆದರೂ ಗಾಂಜಾ ಕೇಸ್​ನಲ್ಲಿ ಬಂಧಿತರಾಗುತ್ತಿರುವವರ ಪೈಕಿ ಬಹುತೇಕರು ಹೊಸಬರು ಎಂಬುದು ಗಮನಾರ್ಹ. ಕಳೆದ ಐದು ವರ್ಷಗಳಲ್ಲಿ (2020ರ ಸೆಪ್ಟೆಂಬರ್​ವರೆಗೆ) ಜಿಲ್ಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಸುಮಾರು 11 ಲಕ್ಷಕ್ಕೂ ಹೆಚ್ಚು ವೌಲ್ಯದ 91 ಕೆ.ಜಿ ಗಾಂಜಾವನ್ನು ವಶ ಪಡಿಸಿಕೊಂಡಿದ್ದಾರೆ. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 52 ಪ್ರಕರಣಗಳು ದಾಖಲಾಗಿವೆ.

ಗಾರ್ಮೆಂಟ್ಸ್ , ಹೋಟೆಲ್ , ಕೈಗಾರಿಕೆ ಸೇರಿದಂತೆ ಎಲ್ಲಾ ಸ್ತರದ ಉದ್ಯೋಗಸ್ಥರು ಕೊರೋನಾ ಬಳಿಕ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಈ ಸಂಕಟದ ಲಾಭ ಪಡೆದ ಗಾಂಜಾ ಮಾಫಿಯಾ ಜಾಲವು ಹಣದಾಸೆ ತೋರಿಸಿ ಹೊಸಬರನ್ನು ನೇಮಿಸಿಕೊಳ್ಳಲಾರಂಭಿಸಿದೆ. ಕೆಲ ಗ್ರಾಮಗಳಲ್ಲಿ ಮಹಿಳೆಯರು ಮನೆಯಲ್ಲೇ ಮಾರಾಟ ಜಾಲವನ್ನು ವಿಸ್ತರಣೆ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಒಂದು ಕೆ.ಜಿ ಮಾರಾಟ ಮಾಡಿದರೆ ಸಾವಿರಾರು ರುಪಾಯಿ ಸಿಗಲಿದೆ ಎಂದು ಆಮಿಷವೊಡ್ಡಿ ತಮ್ಮ ಕಡೆಗೆ ಸೆಳೆಯುತ್ತಿರಬಹುದು ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.

ಈ ಗಾಂಜಾ ಸಾಕಾಣಿಕೆಯಲ್ಲಿ ಹೊಸಬರನ್ನು ಮಾರಾಟ ದಂಧೆಕೋರರು ಬಳಸಿಕೊಳ್ಳುತ್ತಿದ್ದಾರೆ. ಆದರೆ, ಬಂದ ಹೊಸ ಆರೋಪಿಗಳ ಪೈಕಿ ವ್ಯಸನಿಗಳು ಕೂಡಾ ಇದ್ದಾರೆ. ಸುಲಭವಾಗಿ ಹಣ ಸಂಪಾದಿಸುವ ಆಕರ್ಷಣೀಯ ಉದ್ಯಮವಾಗಿ ಗಾಂಜಾ ದಂಧೆ ಕಾಣುತ್ತಿದೆ.

ಕಾರ್ಖಾನೆಯೊಂದರ ಆವರಣದಲ್ಲಿಯೇ ಗಾಂಜಾ:

ಕಾಡಂಚಿನ ಗ್ರಾಮ, ತೋಟಗಳು ಹಾಗೂ ಸಂಚಾರವಿಲ್ಲದ ಹಳ್ಳ-ಕೊಳ್ಳಗಳು, ಪಾಳು ಬಿದ್ದ ತೆರದ ಬಾವಿಗಳಲ್ಲಿ ಗಾಂಜಾ ಬೆಳೆಯುತ್ತಿರುವ ಪ್ರಕರಣಗಳು ವರದಿಯಾಗಿದ್ದವು. ಆದರೀಗ ಬಿಡದಿ ಕೈಗಾರಿಕೆ ಪ್ರದೇಶದ ಕಾರ್ಖಾನೆಯೊಂದರ ಆವರಣದಲ್ಲಿಯೇ ಗಾಂಜಾ ಬೆಳೆದಿದ್ದ ಪ್ರಕರಣ ಗಾಂಜಾ ದಂಧೆಯ ಲೋಕವನ್ನು ಅನಾವರಣಗೊಳಿಸಿದೆ.

ಕೆಲವೆಡೆ ಹೊಲ, ತೋಟಗಳಲ್ಲಿ ಗಾಂಜಾ ಬೆಳೆಯಲಾಗುತ್ತಿದೆ. ರೈತರು ಅರಿವಿದ್ದೊ, ಅರಿವಿಲ್ಲದೆ ಹಣದಾಸೆಗೋ ಈ ಜಾಲದಲ್ಲಿ ಸಿಲುಕಿ ಜೈಲು ಸೇರುತ್ತಿದ್ದಾರೆ. 5-10 ಗಿಡಗಳಿಂದ ಹಿಡಿದು ನೂರಾರು ಗಿಡಗಳವರೆಗೆ ಬೆಳೆಯಲಾಗುತ್ತಿದೆ. ಈ ಬೆಳೆಯ ಹಿಂದೆ ವ್ಯವಸ್ಥಿತ ಜಾಲವೇ ಇದ್ದು, ಪೊಲೀಸ್ ಇಲಾಖೆಯವರು ರೈತರು ಹಾಗೂ ಮಾರಾಟಗಾರರನ್ನು ಬಂಸುತ್ತಿದ್ದಾರೆಯೇ ವಿನಾಃ ಮೂಲಕ್ಕೆ ಹೋದಂತೆ ಕಾಣುತ್ತಿಲ್ಲ.

ಕಾಡಂಚಿನ ಗ್ರಾಮಗಳಲ್ಲಿರುವ ಬಡ ರೈತರನ್ನು ಗುರುತಿಸುವ ಕೆಲ ಬ್ರೋಕರ್ ಗಳು ಗಾಂಜಾ ಬೀಜವನ್ನು ನೀಡುತ್ತಾರೆ. ಗಾಂಜಾ ಬೆಳೆದ ಬಳಿಕ ತಾವೇ ಕೊಳ್ಳುವುದಾಗಿಯೂ ನಂಬಿಸಿ ರೈತರನ್ನು ಯಾಮಾರಿಸುತ್ತಾರೆ. ಭವಿಷ್ಯದಲ್ಲಿ ಎದುರಾಗಬಹುದಾದ ಅನಾಹುತದ ಬಗ್ಗೆ ಯೋಚಿಸದ ಕೆಲ ರೈತರು ಹಣದಾಸೆಗೆ ಬಲಿಯಾಗಿ ಗುಡ್ಡ ಪ್ರದೇಶ ಹಾಗೂ ಹೊಲಗಳಲ್ಲಿ ಬೆಳೆಗಳ ನಡುವಿನಲ್ಲಿ ಗುಟ್ಟಾಗಿ ಗಾಂಜಾ ಬೆಳೆಯುತ್ತಾ ಇಳುವರಿ ಹೆಚ್ಚಳಕ್ಕೆ ಕಾರಣರಾಗುತ್ತಿದ್ದಾರೆ.

ನಗರ-ಹಳ್ಳಿಗಳಲ್ಲೂ ಮಾರುಕಟ್ಟೆ:

ಕೆಲ ರೈತರು ಯಾರ ಕಣ್ಣಿಗೂ ಸಿಗದೆ ವ್ಯವಹಾರ ಪೂರೈಸಿಕೊಂಡು ಹಣ ಮಾಡಿಕೊಳ್ಳುತ್ತಾರೆ. ಅನೇಕರು ಪೊಲೀಸರ ಕೈಗೆ ಸಿಕ್ಕು ಬಿದ್ದು ಜೀವಮಾನವಿಡಿ ಒದ್ದಾಡುತ್ತಾರೆ. ಇದೊಂದು ಅಪರಾಧ ಎನ್ನುವುದು ಗೊತ್ತಿದ್ದರೂ ಗಾಂಜಾ ಬೆಳೆಯುತ್ತಿದ್ದಾರೆಯೇ ಎನ್ನುವ ಪ್ರಶ್ನೆ ಉದ್ಭವವಾಗಿದೆ.
ಒಂದೆಡೆ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಬೆಳೆಯ ನಡುವೆ ಗಾಂಜಾ ಬೆಳೆಯುವ ದಂಧೆಯಾದರೆ, ಇನ್ನೊಂದೆಡೆ ನಗರ ಪ್ರದೇಶದಲ್ಲಿ ಇದಕ್ಕೆ ಮಾರುಕಟ್ಟೆ ಮಾಡುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿತ್ತು. ಅದರೀಗ ಗ್ರಾಮೀಣ ಪ್ರದೇಶದಲ್ಲೂ ‘ಭಂಗಿ ರಂಗ’ರು ಹೆಚ್ಚಾಗುತ್ತಿದ್ದಾರೆ. ಭಂಗಿ ಸೇದುವ ಚಟಕ್ಕೆ ಬಿದ್ದ ಹಿರಿಯರು ಯುವಕರನ್ನು ಉತ್ತೇಜಿಸಿ ಚಟಕ್ಕೆ ಹತ್ತಿಸುತ್ತಿದ್ದಾರೆ.

ರೈಲು ನಿಲ್ದಾಣ, ಪ್ರಮುಖ ವೃತ್ತಗಳು ಸೇರಿದಂತೆ ಜನನಿಬಿಡ ಪ್ರದೇಶಗಳು ಹಾಗೂ ಕೆಲವು ಬಡಾವಣೆಗಳಲ್ಲಿ ಚಿಲ್ಲರೆ ರೂಪದಲ್ಲಿ ಗಾಂಜಾ ಮಾರಾಟವಾಗುತ್ತಿದೆ. ೫೦ ಗ್ರಾಂ.ನ ಸಣ್ಣ ಪ್ಯಾಕೆಟ್ ಹಾಗೂ ಬೆಂಕಿ ಪೊಟ್ಟಣಗಳಲ್ಲಿ ಚಿಲ್ಲರೆ ಲೆಕ್ಕದಲ್ಲಿ ಕೆಲವು ಅಂಗಡಿಗಳಲ್ಲಿಯೂ ಮಾರಾಟ ನಡೆಯುತ್ತಿವೆ ಎಂಬ ದೂರುಗಳು ಕೇಳಿ ಬಂದಿವೆ. ಪೊಲೀಸರಿಂದ ಗಾಂಜಾ ದಂಧೆಗೆ ಕಡಿವಾಣ ಹಾಕುವ ಕಾರ್ಯ ನಡೆದಿದೆ.

ಮಾದಕ ವಸ್ತುಗಳ ಮಾರಾಟದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಅಪರಾಗಳ ಮೇಲೆ ಕಣ್ಣಿಡಲಾಗಿದೆ. ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ಮಾರಾಟ ಜಾಲಗಳನ್ನು ಪತ್ತೆ ಮಾಡಿ ಅಂತಹವರನ್ನು ಬಂಸುವ ಕಾರ್ಯ ನಡೆದಿದೆ ಎನ್ನುತ್ತಾರೆ ರಾಮನಗರ ಎಸ್ಪಿ
ಎಸ್ .ಗಿರೀಶ್.

ಕಾನೂನು ಪ್ರಕಾರ ಗಾಂಜಾ ಬೆಳೆಯುವುದು, ಅದಕ್ಕೆ ಪ್ರೇರೇಪಿಸುವುದು, ಇರಿಸಿಕೊಳ್ಳುವುದು ಅಪರಾಧ. ಅಡಮಾನಕ್ಕೆ ನೀಡಿದ ಜಮೀನಿನಲ್ಲಿ ಬೇರೆಯವರು ಗಾಂಜಾ ಬೆಳೆದರೂ ಅದಕ್ಕೆ ಮೂಲ ಜಮೀನು ಮಾಲೀಕನೇ ಹೊಣೆಗಾರನಾಗುತ್ತಾನೆ. ಹಾಗಾಗಿ ಜಮೀನು ಅಡಮಾನಕ್ಕೆ ನೀಡಿರುವ ರೈತರು ಎಚ್ಚರಿಕೆ ವಹಿಸಬೇಕಿದೆ. ಅಕ್ರಮ ಗಾಂಜಾ ಪ್ರಕರಣ ಜಾಮೀನು ರಹಿತ ಅಪರಾಧವಾಗಿದ್ದು, ಎನ್ ಡಿಪಿಎಸ್ ಕಾಯ್ದೆ ಪ್ರಕಾರ ಆರೋಪಿಗೆ ಗರಿಷ್ಠ 10 ವರ್ಷ ಜೈಲು ಶಿಕ್ಷೆ ಜತೆಗೆ 1 ಲಕ್ಷ ರುಪಾಯಿಗೂ ಹೆಚ್ಚು ದಂಡ ವಿದಿಸುವ ಅವಕಾಶವಿದೆ. ಹಾಗಾಗಿ ರೈತರು ಸಾಕಷ್ಟು ಎಚ್ಚರಿಕೆ ವಹಿಸಬೇಕು.

Spread the love

Related Articles

Leave a Reply

Your email address will not be published. Required fields are marked *

Back to top button