ದೇವನಹಳ್ಳಿಗೆ ಏಕಿಲ್ಲ ಕಾವೇರಿ ನೀರು?

ದೇವನಹಳ್ಳಿ: ರಾಜ್ಯದಲ್ಲಿ ತೀವ್ರವಾಗಿ ನೀರಿನ ಅಭಾವ ಎದುರಿಸುತ್ತಿರುವ ಮೂರು ಜಿಲ್ಲೆಗಳೆಂದರೆ ಕೋಲಾರ, ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಕೋಲಾರಕ್ಕೆ ಕೆ.ಸಿ ವ್ಯಾಲಿ ಯೋಜನೆಯಲ್ಲಿ ಕೆರೆಗಳಿಗೆ ನೀರು ಒದಗಿಸಿಕೊಡಲಾಗಿದೆ. ಇದರಿಂದಾಗಿ ಅಂತರ್ಜಲ ಹೆಚ್ಚಾಗಿ ನೀರಿನ ಬವಣೆಯನ್ನು ಬಹುತೇಕ ನೀಗಿಸಲು ಸಾಧ್ಯವಾಗಿದೆ ಎಂಬ ಅಭಿಪ್ರಾಯವಿದೆ. ಆದರೆ ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಅಂತರ್ಜಲ ಮಟ್ಟ ಕುಸಿದು ನೀರಿನ ತೀವ್ರ ಅಭಾವದಿಂದಾಗಿ ಇಲ್ಲಿನ ರೈತರು ಜಾನುವಾರುಗಳು ತತ್ತರಿಸುವಂತಾಗಿದೆ. ಎಚ್ ಎನ್ ವ್ಯಾಲಿ ನೀರು ದೇವನಹಳ್ಳಿ ಮೂಲಕವೇ ಚಿಕ್ಕಬಳ್ಳಾಪುರಕ್ಕೆ ಹಾದುಹೋಗುತ್ತಿದ್ದರೂ ಚಿಕ್ಕಬಳ್ಳಾಪುರದ 70 ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಆದರೆ ದೇವನಹಳ್ಳಿಯ ಕೇವಲ 9 ಕೆರೆಗಳಿಗೆ ಮಾತ್ರ ನೀರು ಹರಿಸಲಾಗುತ್ತಿದೆ. ದೇವನಹಳ್ಳಿ ಸುತ್ತಮುತ್ತಲಿನಲ್ಲಿ ಕೂಡ ನೂರಾರು ಕೆರೆಗಳು ನೀರಿಲ್ಲದೆ ಬರಡಾಗಿದ್ದರೂ ಈ ತಾರತಮ್ಯ ಯಾಕೆ? ಎಂಬುದು ಈ ಭಾಗದ ಜನರ ಪ್ರಶ್ನೆಯಾಗಿದೆ.
ಕೇಂದ್ರ ಸರ್ಕಾರದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಶಕ್ತಿ ಮಂತ್ರಾಲಯ ಭಾರತ್ ಸರ್ಕಾರ 2024ರ ವೇಳೆಗೆ ಗ್ರಾಮೀಣ ಭಾಗದ ಪ್ರತಿಯೊಂದು ಮನೆ ಮನೆಗೂ ನಳದ ಮೂಲಕ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರು ಒದಗಿಸಲು ಜಲ ಜೀವನ್ ಮಿಷನ್ ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಈ ಗುರಿಯನ್ನು ಕರ್ನಾಟಕ ರಾಜ್ಯ ಸರ್ಕಾರವು 2023ರೊಳಗಾಗಿ ರಾಜ್ಯ ಎಲ್ಲಾ ಗ್ರಾಮೀಣ ಕುಟುಂಬಗಳಿಗೆ ಪ್ರತಿ ಮನೆಗೂ ನಳ ಸಂಪರ್ಕವನ್ನು ಕಲ್ಪಿಸಲು ‘ಮನೆ ಮನೆಗೆ ಗಂಗೆ’ ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಇಲ್ಲಿ ನೀರಿನ ಮೂಲವಿಲ್ಲ ಅದ್ದರಿಂದ ಇದನ್ನು ಅನುಷ್ಠಾನಗೊಳಿಸುವುದು ಅಸಾಧ್ಯ ಎಂಬ ಅಭಿಪ್ರಾಯ ಅಧಿಕಾರಿಗಳದು.
ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇದ್ದರೂ ದೇವನಹಳ್ಳಿಯಲ್ಲಿ ನೀರಿನ ಸಮಸ್ಯೆ ಇರುವುದಕ್ಕೆ ಸರ್ಕಾರದ ಇಚ್ಛಾಶಕ್ತಿಯ ಕೊರತೆಯೇ ಕಾರಣವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಾಶ್ವತ ಕುಡಿಯುವ ನೀರನ್ನು ಒದಗಿಸಲು ಗಂಭೀರವಾದ ಪ್ರಯತ್ನಗಳು ನಡೆದಿಲ್ಲ ಎಂಬುದು ಬಹುತೇಕ ಜನರ ಅಭಿಪ್ರಾಯ.
ಬೃಹತ್ ಬೆಂಗಳೂರು ನಗರಕ್ಕೆ ಸರಬರಾಜಾಗುವ ಕಾವೇರಿ ನೀರನ್ನು ದೇವನಹಳ್ಳಿಗೆ ಯಾಕೆ ಒದಗಿಸಿ ಕೊಡಬಾರದು ಎಂಬುದು ಈ ಭಾಗದ ಜನರ ಪ್ರಶ್ನೆಯಾಗಿದೆ. ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಪ್ರಯತ್ನಗಳು ನಡೆದರೆ ಕಾವೇರಿ ನೀರು ಒದಗಿಸುವುದು ಕಷ್ಷವಲ್ಲ ಎಂದು ಸಾರ್ವಜನಿಕರು ಅಭಿಪ್ರಾಯ ಪಡುತ್ತಾರೆ.

“ನೀರಿನ ಕೊರತೆ ನೀಗಿಸಲು ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಅಡಿಯಲ್ಲಿ ಯೋಜನೆಗಳನ್ನು ರೂಪಿಸಲಾಗಿದ್ದರು ಅದಕ್ಕೆ ತಕ್ಕಂತೆ ನೀರಿನ ಮೂಲಗಳಿಲ್ಲ ಈ ಭಾಗದಲ್ಲಿ ನದಿಮೂಲಗಳಾಗಲಿ ಡ್ಯಾಂಮ್ ಗಳಾಗಲಿ ಇಲ್ಲ ಅದ್ದರಿಂದ ಬಹಳಷ್ಟು ಕೊಳವೆ ಬಾವಿಗಳು ನೀರಿಲ್ಲದೆ ಬತ್ತಿ ಹೋಗಿವೆ ನೀರಿನ ಕೊರತೆ ನೀಗಿಸಲು ಬತ್ತಿ ಹೋಗಿರುವ ಕೆರೆಗಳಿಗೆ ನೀರು ತುಂಬಿಸಲು ಯೋಜನೆ ರೂಪಿಸಬೇಕಿದೆ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪೂರ್ಣಗೊಂಡು ಅನುಷ್ಠಾನಗೊಂಡರೆ ಈ ಭಾಗದ ನೀರಿನ ಕೊರತೆ ನೀಗಲಿದೆ.”
-ಸೋಮಶೇಖರ್
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ದೇವನಹಳ್ಳಿ




