ರಾಮನಗರ

ಆನೆ ದಾಳಿಗೆ ರೈತ ಸಾವು; ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಕಾರಣವೆಂದು ಗ್ರಾಮಸ್ಥರ ಆಕ್ರೋಶ

ರಾಮನಗರ: ಜಮೀನಿನ ಬಳಿಯಿದ್ದ ಸಂದರ್ಭದಲ್ಲಿ ಇಲ್ಲಿನ ದಬ್ಬಗುಳೇಶ್ವರ ದೇವಾಲಯದ ಹಿಂಭಾಗದಿAದ ಹಠಾತ್ತನೆ ಬಂದ ಕಾಡಾನೆಯೊಂದು ವ್ಯಕ್ತಿಯೋರ್ವನ ಮೇಲೆ ದಾಳಿ ನಡೆಸಿದ್ದರಿಂದ ಆತ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕನಕಪುರ ತಾಲೂಕಿನ ಕೋಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗುಳಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತ ರೈತ ವೆಂಕಟಶೆಟ್ಟಿ

ತಾಲೂಕಿನ ಕೋಡಿಹಳ್ಳಿ ಹೋಬಳಿ ಏರಂದಪ್ಪನಹಳ್ಳಿ ಗ್ರಾಮಪಂಚಾಯತಿಯ ಗುಳಗನಹಳ್ಳಿ ಗ್ರಾಮದ ಹೊರವಲಯದ ದೇವಾಲಯ ಬಳಿಯ ಪಕ್ಕದ ಜಮೀನಿನೊಂದರಲ್ಲಿ ವಾಸವಾಗಿರುವ ರೈತ ವೆಂಕಟಶೆಟ್ಟಿ (೮೦) ಆನೆ ದಾಳಿಗೆ ತುತ್ತಾದ ವ್ಯಕ್ತಿ.

ವಿಷಯ ತಿಳಿಯುತ್ತಿದ್ದಂತೆ ಸುತ್ತಮುತ್ತಲ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿ ರೈತರ ಜಮೀನುಗಳಿಗೆ ಕಾಡಾನೆಗಳ ದಾಳಿಯಿಂದ ರೈತರ ಫಸಲು ನಾಶವಾಗುವುದಲ್ಲದೆ ಸಾವು-ನೋವುಗಳು ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ಅರಣ್ಯ ಇಲಾಖೆ ರೈತರ ರಕ್ಷಣೆ ಮಾಡುವುದಾಗಲೀ, ಆನೆಗಳ ಹಾವಳಿಯನ್ನು ತಡೆಯುವುದಾಗಲೀ ಯಾವುದನ್ನೂ ಮಾಡುತ್ತಿಲ್ಲ. ಘಟನೆಯ ಬಗ್ಗೆ ಮಾಹಿತಿ ನೀಡಿದರೂ ಅರಣ್ಯ ಇಲಾಖೆಯವರು ಸ್ಥಳಕ್ಕೆ ಬರಲು ವಿಳಂಬ ಮಾಡುತ್ತಿದ್ದಾರೆಂದು ಕುಪಿತಗೊಂಡು ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪರಿಹಾರಕ್ಕೆ ಒತ್ತಾಯ:

ಗ್ರಾ.ಪಂ. ಮಾಜಿ ಅಧ್ಯಕ್ಷ ರುದ್ರಸ್ವಾಮಿ ಮಾತನಾಡಿ, ಆನೆ ಧಾಳಿಯಿಂದ ತೀವ್ರ ತೊಂದರೆ ಅನುಭವಿಸುವ ಕುಟುಂಬಗಳಿಗೆ ಅರಣ್ಯ ಇಲಾಖೆ ವತಿಯಿಂದ ಶೀಘ್ರವೇ ಪರಿಹಾರ ಕಲ್ಪಿಸಬೇಕು. ಮುಂದಿನ ಇವರ ಜೀವನೋಪಾಯಕ್ಕೆ ೨೦ ಲಕ್ಷ ರೂ. ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು.

ಸ್ಥಳಕ್ಕೆ ಕೋಡಿಹಳ್ಳಿ ಸಬ್‌ಇನ್ಸ್ಪೆಕ್ಟರ್ ಅನಂತ್‌ರಾಮ್ ಮತ್ತವರ ಸಿಬ್ಬಂದಿ,  ಅರಣ್ಯ ಇಲಾಖೆಯ ಲಕ್ಷ್ಮಿಕಾಂತ್ ಮುಂತಾದವರು ಬೇಟಿ ನೀಡಿದ್ದರು.
Spread the love

Related Articles

Leave a Reply

Your email address will not be published. Required fields are marked *

Back to top button