ಉತ್ತರ ಕನ್ನಡಜಿಲ್ಲಾ ಸುದ್ದಿ

ಭಟ್ಕಳ: ಜಾಲಿ ಪಟ್ಟಣ ಪಂಚಾಯತ್​ನಲ್ಲಿ ಕಾಂಕ್ರೀಟ್ ರಸ್ತೆಯನ್ನು ಸಂಪೂರ್ಣ ಹಾಳುಗೆಡವಿದ ಗುತ್ತಿಗೆದಾರ

ಕಾರವಾರ : ಭಟ್ಕಳ ತಾಲೂಕಿನ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 59 ಕೋಟಿ ರೂ.ವೆಚ್ಚದಲ್ಲಿ ಯುಜಿಡಿ ಕಾಮಗಾರಿ ನಡೆಯುತ್ತಿದ್ದು,ಈ ಕಾಮಗಾರಿಯ ಸಂಬಂಧ ತಾಲೂಕಿನ ಹೌಸಿಂಗ್ ಬೋರ್ಡ್ ಸಮೀಪ 20 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾದ ಕಾಂಕ್ರೀಟ್ ರಸ್ತೆಯನ್ನು ಸಂಪೂರ್ಣ ಹಾಳುಗೆಡವಿದ್ದಲ್ಲದೇ ಈ ಗುತ್ತಿಗೆದಾರ ಮಾಡುತ್ತಿರುವ ಯುಜಿಡಿ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂಬ ಆಕ್ರೋಶಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಮಹಾರಾಷ್ಟ್ರ ಮೂಲದ ಖಾಸಗಿ ಕಂಪನಿಯಾದ ಎಲ್ ಸಿ ಇನ್ಪ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಎನ್ನುವ ಕಂಪನಿಯೊಂದು 100 ಕೋಟಿಗೂ ಅಧಿಕ ವೆಚ್ಚದಲ್ಲಿ ಯುಜಿಡಿ ಕಾಮಗಾರಿ ನಡೆಸುತ್ತಿದೆ.ಈ ಕಾಮಗಾರಿಗೆ ಬಳಸುವ ಪೈಪ್ ರಿಸೈಕಲ್ಡ್ ಪೈಪ್ ಲೈನ್​​​​ಗಳಾಗಿದ್ದು, ಕಳಪೆ ಮಟ್ಟದ್ದಾಗಿದೆ ಹಾಗೂ ಟ್ಯಾಂಕ್ ಗಳಲ್ಲಿ ಈಗಾಗಲೇ ಸೋರಿಕೆ ಕಂಡು ಬಂದಿದೆ. ಇವರು ನಡೆಸುತ್ತಿರುವ ಕಾಮಗಾರಿಯ ವಿರುದ್ದ ತಾಲೂಕಿನಾಧ್ಯಂತ ಆಕ್ರೋಶಗಳು ಕೇಳಿಬರುತ್ತಿದೆ. ಈ ಹಿಂದೆ ಇವರು ಕಾರ್ಗದ್ದೆಯಲ್ಲಿ ಯುಜಿಡಿ ಕಾಮಗಾರಿಯನ್ನು ಮುಂದಿಟ್ಟುಕೊಂಡು 15 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣವಾಗಿದ್ದ ಕಾಂಕ್ರೀಟ್ ರಸ್ತೆಯನ್ನು ಸಂಪೂರ್ಣವಾಗಿ ಹಾಳುಗೆಡವಿದ್ದರು. ಈ ಕಾರಣಕ್ಕೆ ಲಕ್ಷಗಟ್ಟಲೆ ವೆಚ್ಚದಲ್ಲಿ ನಿರ್ಮಾಣವಾದ ಕಾಂಕ್ರೀಟ್ ರಸ್ತೆಯನ್ನು ಸ್ಥಳೀಯ ಸಾರ್ವಜನಿಕರು ಒಂದು ವರ್ಷವೂ ಕೂಡಾ ಸರಿಯಾಗಿ ಉಪಯೋಗಿಸಿರಲಿಲ್ಲ.

ಈ ಬಗ್ಗೆ ಸ್ಥಳೀಯ ಸಾರ್ವಜನಿಕರು ಪ್ರಶ್ನಿಸಿದರೆ ಹಾರಿಕೆಯ ಉತ್ತರವನ್ನು ನೀಡುವುದರ ಮೂಲಕ ಸಾರ್ವಜನಿಕರ ಬಾಯಿ ಮುಚ್ಚಿಸುವ ಕೆಲಸ ಮಾಡಲಾಗಿತ್ತು.ಆದರೆ ಇದೇ ಕಂಪನಿ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 59 ಕೋಟಿ ರೂ.ವೆಚ್ಚದಲ್ಲಿ ಯುಜಿಡಿ ಕಾಮಗಾರಿ ನಡೆಸುತ್ತಿದ್ದು, ಹೌಸಿಂಗ್ ಬೋರ್ಡ್ ಪ್ರದೇಶದಲ್ಲಿ ಈ ಕಂಪನಿ ಯುಜಿಡಿ ಕಾಮಗಾರಿಯ ಹೆಸರಲ್ಲಿ ಅಂದಾಜು ಐದು ವರ್ಷದ ಹಿಂದೆ 20 ಲಕ್ಷಕ್ಕೂ ಹೆಚ್ಚಿನ ಮೌಲ್ಯದಲ್ಲಿ ನಿರ್ಮಾಣವಾದ ಕಾಂಕ್ರೀಟ್ ರಸ್ತೆಯನ್ನು ಅಗೆದು ಹಾಕಿ ಸಂಪೂರ್ಣ ನಾಶಪಡಿಸಿರುವ ಘಟನೆ ನಡೆದಿರುತ್ತದೆ. ಈ ಬಗ್ಗೆ ಕಂಪನಿಯ ಇಂಜಿನಿಯರ್ ಅವರನ್ನು ಪ್ರಶ್ನಿಸಿದರೆ ನಾವೇನು ಮಾಡಲಾಗುತ್ತದೆ.ನಮಗೆ ಕಾಮಗಾರಿ ನಡೆಸುವುದಷ್ಟೆ ಮುಖ್ಯ. ರಸ್ತೆ ಇದೆ ಎಂದು ಕಾಮಗಾರಿ ನಿಲ್ಲಿಸಲು ಸಾಧ್ಯವೇ ? ಎಂಬ ಪ್ರಶ್ನೆಯನ್ನು ಕೇಳುತ್ತಾರೆ. ಇದೆಂತಾ ಅವಸ್ಥೆ ಸ್ವಾಮಿ ಅಭಿವೃದ್ದಿಯ ಹೆಸರಲ್ಲಿ ಅಭಿವೃದ್ದಿಗಾಗಿ ಲಕ್ಷಗಟ್ಟಲೆ ವೆಚ್ಚದಲ್ಲಿ ನಿರ್ಮಾಣವಾದ ರಸ್ತೆಯನ್ನೇ ಹಾಳುಗೆಡವಿದರೆ ಇದೆಂತ ಅಭಿವೃದ್ದಿ ಕಾರ್ಯ ಎನ್ನುವುದು ಸ್ಥಳೀಯ ಸಾರ್ವಜನಿಕರ ಪ್ರಶ್ನೆಯಾಗಿದೆ.

ಭಟ್ಕಳ ತಾಲೂಕಿನಲ್ಲಿ ನೂರಾರು ಕೋಟಿ ರೂಪಾಯಿಗಳು ಈ ರೀತಿಯಲ್ಲಿ ಪೋಲಾಗುತ್ತಿದ್ದರೆ ಸಂಬಂಧಿಸಿದ ಅಧಿಕಾರಿಯಾದರು ಏನು ಮಾಡುತ್ತಿದ್ದಾರೆ ? ಜನಪ್ರತಿನಿದಿಗಳು ಏನು ಮಾಡುತ್ತಿದ್ದಾರೆ ? ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಈ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಜಾಣ ಕುರುಡುತನ ತೋರಿಸುತ್ತಿರುವುದನ್ನು ನೋಡಿದರೆ ಈ ಕಳಪೆ ಕಾಮಗಾರಿಯಿಂದ ಇವರ ಮನೆಗಳಿಗೆ ಕಮೀಷನ್ ತಲುಪುತ್ತದೆಯೆ ಎಂಬ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಹುಟ್ಟುಹಾಕಿದೆ.

ಒಟ್ಟಾರೆ ಸರಕಾರ ರಾಜ್ಯಗಳ ಅಭಿವೃದ್ದಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನವನ್ನು ಜಾರಿಗೊಳಿಸುತ್ತದೆ. ಆದರೆ ಇಂತಹ ಗುತ್ತಿಗೆದಾರ ಕಂಪನಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಹಪಾಹಪಿತನಕ್ಕೆ ದೇಶ ಕೊಳ್ಳೆಯಾಗುತ್ತಿದೆ. ಈಗೀಗ ದೇಶದ ಹೊರಗಿನ ಶತ್ರುಗಳಿಗಿಂತ ದೇಶದ ಒಳಗಿರುವ ಭ್ರಷ್ಟರೆನ್ನುವ ಗೆದ್ದಲು ಹುಳುಗಳು ದೇಶಕ್ಕೆ ಅಪಾಯ ಎಂದರೆ ತಪ್ಪಾಗಲಿಕ್ಕಿಲ್ಲ.

Spread the love

Related Articles

Leave a Reply

Your email address will not be published. Required fields are marked *

Back to top button