ಪಿಎಂಜಿಎಸ್ವೈ ರಸ್ತೆ ನಿರ್ಮಾಣ ರೈತರಿಗೆ ನಷ್ಟ: ಪರಿಹಾರಕ್ಕೆ ಆಗ್ರಹ

ವರದಿ: ಕಿರುಗುಂದ ರಫೀಕ್
ಚಿಕ್ಕಮಗಳೂರು: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಮೂಡಿಗೆರೆ ತಾಲೂಕಿನ ಕಿರುಗುಂದ ಸಮೀಪದ ಕಜ್ಜೇಹಳ್ಳಿ ಗಡಿಯಿಂದ ಮಾನಲ್, ಕನ್ನೇಹಳ್ಳಿ, ಜಾಣಿಗೆ ಮೂಲಕ 8 ಕಿ.ಮೀ. ದೂರ ಹಾದುಹೋಗುವ ಕೂಡುರಸ್ತೆಯ ಅಭಿವೃದ್ಧಿಗಾಗಿ ಅಗಲೀಕರಣಕ್ಕೆ ಸಿದ್ಧತೆ ನಡೆದಿದೆ. ಈ ರಸ್ತೆ ನಿರ್ಮಾಣದಿಂದ ಹಲವು ಗ್ರಾಮಸ್ಥರಿಗೆ ಅನುಕೂಲವಾಗಲಿದೆ.
ಶಾಲಾ ಕಾಲೇಜು ವಿದ್ಯಾರ್ಥಿಗಳು, ಕಚೇರಿ ಕೆಲಸಗಳಿಗೆ ಹೋಗುವವರು, ಜನಸಾಮಾನ್ಯರು ನಾಲ್ಕರಿಂದ ಐದು ಕಿ.ಮೀ. ದೂರ ಕಾಲ್ನಡಿಗೆಯಲ್ಲೇ ಕ್ರಮಿಸಿ ಹೋಗಿ ನಂತರ ಬಸ್ ಹಿಡಿಯಬೇಕಾದಂತಹ ಕುಗ್ರಾಮಗಳಿಗೆ ರಸ್ತೆ ನಿರ್ಮಾಣದ ಬಳಿಕ ಬಸ್ ಸೇವೆ ಆರಂಭವಾದಲ್ಲಿ ಸಾಕಷ್ಟು ಅನುಕೂಲವಾಗಲಿದೆ. “ಸುಮಾರು25 ವರ್ಷಕ್ಕೂ ಹಳೆಯದಾದ ಅಭಿವೃದ್ಧಿಯೇ ಕಾಣದ ಪಿಡಬ್ಲೂಡಿ ರಸ್ತೆಯಾಗಿತ್ತು. ಈಗ ಸರ್ಕಾರ ಅಭಿವೃದ್ಧಿಗೆ ಮುಂದಾಗಿರುವುದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ. ಇದು ಹಲವು ದಶಕಗಳ ಹೋರಾಟಕ್ಕೆ ಸಂದ ಜಯವಾಗಿದೆ” ಎನ್ನುತ್ತಾರೆ ಗ್ರಾಪಂ ಸದಸ್ಯ ಆದರ್ಶ್.
ರೈತರ ಜಮೀನಿನ ಭಾಗ ರಸ್ತೆಗೆ ಸೇರ್ಪಡೆ:
ರಸ್ತೆ ಅಗಲೀಕರಣ ಮಾಡುವಾಗ ರಸ್ತೆಯ ಎರಡೂ ಬದಿಯಲ್ಲಿ ಇರುವ ಅನೇಕ ರೈತರ ತೋಟದ ಜಾಗವನ್ನೂ ರಸ್ತೆಗೆ ಸೇರಿಸಿಕೊಳ್ಳಲಾಗುತ್ತಿದೆ. ಹಲವು ವರ್ಷಗಳಿಂದ ಕೃಷಿ ಮಾಡಿಕೊಂಡು ಬಂದಿದ್ದ ತೋಟದ ಗಿಡ, ಮರಗಳನ್ನು ತೆರವುಗೊಳಿಸಲಾಗುತ್ತಿದೆ. ಹೆಚ್ಚು ಜಮೀನು ಇದ್ದವರಿಗೆ ಅಷ್ಟೇನೂ ತೊಂದರೆಯಾಗದು. ಆದರೆ ಅಲ್ಪಸ್ವಲ್ಪ ಜಮೀನು ಹೊಂದಿದ ರೈತರು ತಾವು ಬೆಳೆದ ಕಾಫಿ ಗಿಡಗಳು, ಇತರೆ ಬೆಳೆಗಳನ್ನು ರಸ್ತೆಬದಿಯಲ್ಲಿ ನಾಶಪಡಿಸಿ ನಿಗದಿಯಂತೆ ನಿರ್ಮಾಣ ಮಾಡುವಾಗ ಬೆಳೆಯೊಂದಿಗೆ ತಾವು ಖಾತೆ ಹೊಂದಿರುವ ಜಮೀನಿನ ಜಾಗವನ್ನೇ ರಸ್ತೆಬದಿಯುದ್ದಕ್ಕೂ ಬಿಟ್ಟುಕೊಡಬೇಕಾದ ಅನಿವಾರ್ಯತೆ ಎದುರಾಗಿದೆ.
ಈಗ ಇರುವ ರಸ್ತೆ 12 ಅಡಿ ಅಗಲವಿದೆ. ಇದನ್ನು ಒಟ್ಟು 32 ಅಡಿಗಳಿಗೆ ವಿಸ್ತರಿಸಲಾಗುತ್ತಿದೆ. ರಸ್ತೆಯ ಮಧ್ಯಭಾಗದಿಂದ ಎರಡೂ ಬದಿಯಲ್ಲಿ ತಲಾ 16 ಅಡಿ ಅಗಲೀಕರಣಗೊಳ್ಳುತ್ತದೆ. ಅಂದರೆ ರಸ್ತೆಯ ಅಂಚಿನಿಂದ ಎರಡೂ ಬದಿಯಲ್ಲಿ ತಲಾ 10 ಅಡಿ ಜಾಗ ಬೇಕಾಗಿದೆ. ಹೀಗಾಗಿ ರಸ್ತೆ ಬದಿಯಲ್ಲಿರುವ ತೋಟಗಳಲ್ಲಿ ಬೇಲಿಯಲ್ಲದೆ, ಕನಿಷ್ಟ 5 ಅಡಿಗೂ ಹೆಚ್ಚು ಜಮೀನನ್ನು ರಸ್ತೆ ಹಾದುಹೋಗುವಲ್ಲಿ ಬಿಟ್ಟುಕೊಡಬೇಕಾಗಿದೆ. ಡಾಂಬರ್ ರಸ್ತೆ ಹಾಗೂ ಗದ್ದೆಗಳು ಇರುವಲ್ಲಿ ಸಿಮೆಂಟ್ ರಸ್ತೆ ನಿರ್ಮಾಣ ಒಳಗೊಂಡಿದೆ.
ಪರಿಹಾರ ಕೊಡಿ:
ನಮಗೆ ಆಗುವ ನಷ್ಟಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಅನೇಕ ರೈತರು ಆಗ್ರಹಿಸಿದ್ದಾರೆ. ರಸ್ತೆ ನಿರ್ಮಾಣಕ್ಕೆ ಯಾರೂ ಅಡ್ಡಿಪಡಿಸುವುದಿಲ್ಲ. ರಸ್ತೆ ಅಗಲೀಕರಣಗೊಂಡರೆ ಗ್ರಾಮಸ್ಥರ ಸಂಚಾರಕ್ಕೆ ಅನುಕೂಲವಾಗಲಿದೆ. ಆದರೆ ಅಲ್ಪಸ್ವಲ್ಪ ಜಮೀನು ಹೊಂದಿದ ಬಡರೈತರಿಗೆ ಅನ್ಯಾಯವಾಗಬಾರದು.ನಿರಂತರ ಕೃಷಿ ಚಟುವಟಿಕೆ ನಡೆಸುತ್ತಾ, ನೆಟ್ಟು ಬೆಳೆಸಿದ ಕಾಫಿಗಿಡ, ಇತರೆ ಬೆಳೆ, ಮರಗಿಡಗಳನ್ನು ತೆರವುಗೊಳಿಸುವಾಗ ಅದಕ್ಕೆ ತಕ್ಕ ಪರಿಹಾರ ಕೊಡಿ ಎಂಬುದು ರೈತರ ಆಗ್ರಹವಾಗಿದೆ.
“ನಮ್ಮ ಊರು, ನಮ್ಮ ದೇಶ ಅಂದಾಗ ನಮಗೆ ಮೂಲಸೌಕರ್ಯ ಕಲ್ಪಿಸುವಾಗ ಅವಕಾಶ ಕೊಡುವುದು ನಮ್ಮ ಕರ್ತವ್ಯವಾಗಿರುತ್ತದೆ. ಆದರೂ ರಸ್ತೆ ಅಗಲೀಕರಣಗೊಳ್ಳುವಾಗ ಅಕ್ಕಪಕ್ಕದಲ್ಲಿ ಅಲ್ಪಸ್ವಲ್ಪ ಜಮೀನು ಹೊಂದಿದವರಿಗೆ ನಷ್ಟವುಂಟಾದರೆ, ಜಮೀನಿನ ಭಾಗ ರಸ್ತೆಗೆ ಸೇರ್ಪಡೆಯಾದರೆ ಸೂಕ್ತ ಪರಿಹಾರ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಸಂಸದರು ಸೂಕ್ತ ತೀರ್ಮಾನ ಕೈಗೊಂಡು ಬಡರೈತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸುತ್ತೇವೆ”
-ಬಾಲು,ಮೂಡಿಗೆರೆ ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷ.
“ಕಾಮಗಾರಿಗೆ ಅಂದಾಜು 4 ಕೋಟಿ ಅನುದಾನ ಬಂದಿದೆ. ಇನ್ನೂ ಹೆಚ್ಚಿನ ಅನುದಾನಕ್ಕೆ ಪ್ರಯತ್ನಿಸಲಾಗುತ್ತಿದೆ. ಊರಿಗೆ ಅನುಕೂಲವಾಗುವ ರಸ್ತೆಗೆ ಜನ ಸಹಕರಿಸಬೇಕು. ಪ್ರಸ್ತುತ ಯೋಜನೆಯಲ್ಲಿ ಪರಿಹಾರಕ್ಕೆ ಅವಕಾಶ ಕಡಿಮೆಯಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು. ರೈತರಿಗೆ ಅನ್ಯಾಯವಾಗಲು ಬಿಡೋದಿಲ್ಲ. ಆ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇವೆ”
-ಎಂ.ಕೆ.ಪ್ರಾಣೇಶ್, ಉಪಸಭಾಪತಿ.




