ಹೆದ್ದಾರಿ ನಿರ್ಮಾಣದಲ್ಲಿ ಹಾಕಿದ್ದ ಪೈಪ್ ನಲ್ಲಿ ಸಿಲುಕಿದ್ದ ರೈತನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ತಂಡ

ರಾಮನಗರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸಿದ್ದ ಪೈಪ್ ಲೈನ್ ನಲ್ಲಿ ಸಿಲುಕಿದ್ದ ರೈತನ್ನು ಅಗ್ನಿಶಾಮಕ ದಳ ಕಾರ್ಯಚರಣೆ ನಡೆಸಿ ರಕ್ಷಣೆ ಮಾಡಿರುವ ಘಟನೆ ಕೊಂಕಾಣಿದೊಡ್ಡಿ ಗ್ರಾಮದ ಬಳಿಯ ಬೈಪಾಸ್ ರಸ್ತೆಯಲ್ಲಿ ನಡೆದಿದೆ.
ತಾಲೂಕಿನ ಸಿಂಗ್ರಿಬೋವಿ ದೊಡ್ಡಿ ಗ್ರಾಮದ ರೈತ ರಾಜಣ್ಣ ಪೈಪ್ ಲೈನ್ ನಲ್ಲಿ ಸಿಲುಕಿದ ವ್ಯಕ್ತಿ. ಕೊಂಕಾಣಿದೊಡ್ಡಿ ಗ್ರಾಮದ ಬಳಿ ನಿರ್ಮಾಣವಾಗುತ್ತಿರು ದಶಪಥದ ರಾಷ್ಟ್ರೀಯ ಹೆದ್ದಾರಿ (NH 275) ಯ ಕೆಳಬಾಗದಲ್ಲಿ ಹಳ್ಳದ ನೀರು ಹರಿಯಲು ಹಾಕಿದ್ದ ಪೈಪ್ ಲೈನ್ ನಲ್ಲಿ ಸಿಲುಕಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ರೈತ ರಾಜಣ್ಣ ನನ್ನು ಅಗ್ನಿಶಾಮಕ ತಂಡ ಕಾರ್ಯಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯ ಒಂದು ಬದಿಯ ತನ್ನ ಜಮೀನಿಂದ ಹೆದ್ದಾರಿ ಮತ್ತೊಂದು ಬದಿಯಲ್ಲಿ ಇರುವ ಜಮೀನಿಗೆ ನೀರಿನ ಪೈಪ್ ಅಳವಡಿಸಲು ಹೆದ್ದಾರಿಯಲ್ಲಿ ಹಳ್ಳದ ನೀರು ಹರಿಯಲು ಅಳವಡಿಸಿದ್ದ ಬೃಹತ್ ಪೈಪ್ ಒಳಗೆ ಹೊದ ರಾಜಣ್ಣ ಪೈಪ್ ಲೈನ್ ಒಳಭಾಗದಲ್ಲಿ ಸಿಲುಕಿ ಹಾಕಿಕೊಂಡಿದ್ದ.
ಬೈಪಾಸ್ ರಸ್ತೆಯ ಕೆಳಭಾಗದಲ್ಲಿ ಹಾಕಿದ್ದ ಪೈಪ್ ಲೈನ್
ಸುಮಾರು 200 ಅಡಿ ಉದ್ದ ಇದ್ದು , ರೈತ ರಾಜಣ್ಣ ಪೈಪ್ ಪ್ರವೇಶ ಮಾಡಿದ ನಂತರ ಮಣ್ಣು ಕುಸಿದು ಸುಮಾರು ಅರ್ಧ ಗಂಟೆ ರೈತ ರಾಜಣ್ಣ ಸಾವುಬದುಕಿನ ನಡುವೆ ಹೋರಾಟ ನಡೆಸಿ ಅಂತಿಮವಾಗಿ ಪೋಲಿಸರು ಮತ್ತು ಅಗ್ನಿಶಾಮಕ ತಂಡದವರ ಶ್ರಮದಿಂದ ಸಾವನ್ನು ಗೆದ್ದು ಬಂದಿದ್ದಾರೆ.
ಪೈಪ್ ನಲ್ಲಿ ಸಿಲುಕಿದ್ದ ರೈತ ರಾಜಣ್ಣನನ್ನು ಅಗ್ನಿಶಾಮಕ ದಳದವರು ಕಾರ್ಯಚರಣೆ ನಡೆಸಿ ರಕ್ಷಣೆ ಮಾಡಿದ ಪೈಪಿನಿಂದ ಹೊರತಂದ ತಕ್ಷಣ ನೆರೆದಿದ್ದ ಜನರು ಚಪ್ಪಾಳೆ ತಟ್ಟಿ ಸಿಬ್ಬಂದಿಗಳನ್ನು ಅಭಿನಂದಿಸಿದರು. ಇನ್ನೂ ದುಃಖದ ಮಡುವಿನಲ್ಲಿದ್ದ ರಾಜಣ್ಣನ ಕುಟುಂಬದವರ ಹರ್ಷಕ್ಕೆ ಪಾರವಿರಲಿಲ್ಲ.
