ಉತ್ತರ ಕನ್ನಡಜಿಲ್ಲಾ ಸುದ್ದಿ

ಹೊನ್ನಾವರ: ಹಳ್ಳ ದಾಟಲು ಇಲ್ಲಿ ಜೀವ ಪಣಕ್ಕಿಡಬೇಕು

ಕಾರವಾರ : ಅಲ್ಪ ಮಳೆ ಬಂದರೂ ಉತ್ತರ ಕನ್ನಡ ಜಿಲ್ಲೆಯ ಹಲವು ಗ್ರಾಮಗಳು ನಗರದ ಸಂಪರ್ಕವನ್ನೇ ಕಡಿದುಕೊಳ್ಳುತ್ತದೆ. ಇದೀಗ ಅಕಾಲಿಕ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಹೊಸಾಕುಳಿ ಗ್ರಾಮವು ರಸ್ತೆಯ ಸಂಪರ್ಕ ಕಳೆದುಕೊಂಡಿದ್ದು, ಪ್ರತಿ ದಿನ ಶಾಲೆಗೆ ತೆರಳುವ ವಿದ್ಯಾರ್ಥಿಗಳು, ರೋಗಿಗಳು ಹಾಗೂ ಗರ್ಭಿಣಿ ಸ್ತ್ರೀಯರು ಪರದಾಡುವಂತಾಗಿದೆ.

ಪ್ರತಿ ದಿನ ಹರಿಯುತ್ತಿರುವ ನೀರಿನ ನಡುವೆಯೇ ಜೀವ ಕೈಯಲ್ಲಿ ಹಿಡಿದು ಇಲ್ಲಿನ ಜನರು ಸಾಗಬೇಕು. ಇದು ಹೊನ್ನಾವರದ ಹೊಸಾಕುಳಿ ಗ್ರಾಮದ ಪ್ರತಿ ದಿನದ ಗೋಳು.

ಸುಮಾರು ಮುನ್ನೂರಕ್ಕೂ ಹೆಚ್ಚು ಜನರು ವಾಸವಾಗಿರುವ ಈ ಊರನ್ನು ಚಿಕ್ಕದೊಂದು ಹಳ್ಳ ಬೇರ್ಪಡಿಸುತ್ತದೆ.ಈ ವರೆಗೂ ಈ ಹಳ್ಳಕ್ಕೆ ಸೇತುವೆ ಆಗದ ಕಾರಣ ಅಲ್ಪ ಮಳೆ ಬಂದರೂ ನೀರು ಆವರಿಸಿ ಊರನ್ನು ದಿಗ್ಭಂಧನವಾಗಿಸುತ್ತದೆ.

ಪ್ರತಿ ದಿನ ಈ ಊರಿನಲ್ಲಿ ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಗೆ ತೆರಳುತ್ತಾರೆ. ಇನ್ನು ಅಕಾಲಿಕ ಮಳೆಯಿಂದಾಗಿ ಇದೀಗ ಈ ಊರು ನಗರದ ಸಂಪರ್ಕವನ್ನು ಕಡಿತ ಮಾಡಿಕೊಂಡಿದೆ. ವಿದ್ಯಾರ್ಥಿಗಳು, ಗರ್ಭಿಣಿ ಸ್ತ್ರೀಯರು, ರೋಗಿಗಳು ಪಡಬಾರದ ಪಾಡು ಪಟ್ಟು ಈ ಹಳ್ಳವನ್ನು ದಾಟಿ ಹೋಗಬೇಕಾದ ಸ್ಥಿತಿ ಇದೆ.

ಹೊನ್ನಾವರದ ಈ ಗ್ರಾಮದಲ್ಲಿ ಬಹುತೇಕರು ಹಿಂದುಳಿದ ಜನಾಂಗದವರಿದ್ದಾರೆ. ಜೀವನೋಪಾಯಕ್ಕಾಗಿ ಅಡಿಕೆ,ಭತ್ತದ ಕೃಷಿ ಅವಲಂಭಿಸಿದ್ದಾರೆ. ತಾವು ಬೆಳೆದ ಫಸಲನ್ನು ನಗರಕ್ಕೆ ಕೊಂಡೊಯ್ಯಬೇಕು ಎಂದರೂ ಈ ಹಳ್ಳ ದೊಡ್ಡ ಸಮಸ್ಯೆಯಾಗಿದೆ. ಇನ್ನು ರೋಗಿಗಳು, ವಿದ್ಯಾರ್ಥಿಗಳ ಪಾಡು ಹೇಳತೀರದು. ಬೇಸಿಗೆ ಬಂದರೆ ಈ ಹಳ್ಳ ಬತ್ತುತ್ತದೆ. ಆದರೆ ಇದೀಗ ಅಕಾಲಿಕ ಮಳೆ ಈ ಊರಿನ ಜನರಿಗೆ ನಗರ ಸಂಪರ್ಕವನ್ನು ಕಡಿತಗೊಳಿಸಿದೆ‌.

ಇಷ್ಟು ವರ್ಷದಿಂದಲೂ ಊರಿಗೆ ಮೂಲ ಸೌಕರ್ಯವಿಲ್ಲದೇ ತೊಂದರೆ ಅನುಭವಿಸಿದ್ದೇವೆ. ಇನ್ನಾದರೂ ನಮ್ಮೂರಿಗೊಂದು ಸೇತುವೆ ನಿರ್ಮಿಸಿ ಕೊಡಿ ಎಂದು ಗ್ರಾಮದ ಚಿದಂಬರ ನಾಯ್ಕ ಸ್ಥಳೀಯ ಆಡಳಿತವನ್ನು ಆಗ್ರಹಿಸಿದ್ದಾರೆ.

ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಈ ಗ್ರಾಮದಲ್ಲಿ ಅಕಾಲಿಕ ಮಳೆಯಿಂದ ನಗರ ಸಂಪರ್ಕವನ್ನು ಕಡಿದುಕೊಂಡಿದೆ. ಊರಿನ ಜನರು ಎದೆ ಮಟ್ಟದ ನೀರಿನಲ್ಲೇ ಸಂಚಾರ ಮಾಡುವಂತಾಗಿದೆ. ಇನ್ನಾದರೂ ಸಂಬಂಧಪಟ್ಟ ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕಿದೆ.

Spread the love

Related Articles

Leave a Reply

Your email address will not be published. Required fields are marked *

Back to top button