ಅಕ್ಟೋಬರ್ 1ರೊಳಗೆ ಪಂಚಮಸಾಲಿ ಸಮಾಜವನ್ನು 2ಎಗೆ ಸೇರ್ಪಡೆಗೆ ಕ್ರಮಕೈಗೊಳ್ಳಿ: ನಿಂಗಣ್ಣ ಕರಿಕಟ್ಟಿ

ಧಾರವಾಡ: ಪಂಚಮಸಾಲಿ 2ಎ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಮತ್ತಷ್ಟು ತೀವ್ರತೆ ನೀಡುವ ಉದ್ದೇಶದಿಂದ, ಇದೇ ಸೆ. 25 ರಂದು ಹುಬ್ಬಳ್ಳಿಯ ಗೋಕುಲ ರಸ್ತೆಯ ಗೋಕುಲ ಗಾರ್ಡನ್‌ನಲ್ಲಿ ಪ್ರತಿಜ್ಞಾ ಪಂಚಾಯತ್ ಅಭಿಯಾನ ಆಯೋಜಿಸಲಾಗಿದೆ ಎಂದು ಪಂಚಮಸಾಲಿ ಹೋರಾಟದ ಸ್ವಾಗತ ಸಮಿತಿ ಅಧ್ಯಕ್ಷ ನಿಂಗಣ್ಣ ಕರಿಕಟ್ಟಿ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾದ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಜ್ಞಾ ಪಂಚಾಯತ್ ಕಾರ್ಯಕ್ರಮಕ್ಕೆ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಸಮಾಜದ ಜಿಲ್ಲಾ ಘಟಕ, ತಾಲೂಕು ಘಟಕ ಹಾಗೂ ಗ್ರಾಮ ಘಟಕದ ಪ್ರತಿನಿಧಿಗಳು ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಳ್ಳಲಿದ್ದಾರೆ ಎಂದೂ ಅವರು ತಿಳಿಸಿದರು.
ಈಗಾಗಲೇ ಪಂಚಮಸಾಲಿ ಸಮಾಜದಿಂದ 2ಎ ಗೆ ಸೇರ್ಪಡೆ ಮಾಡುವಂತೆ ಸಾಕಷ್ಟು ಹೋರಾಟ ಮಾಡಿಕೊಂಡ ಬರಲಾಗುತ್ತಿದೆ. ಆದರೆ ಈವರೆಗೂ ಸರ್ಕಾರಗಳು ಬೇಡಿಕೆ ಈಡೇರಿಸಲು ಮುಂದಾಗಿಲ್ಲ, 2012ರಿಂದ ಈ ಹೋರಾಟ ಆರಂಭಗೊಂಡಿದ್ದು, ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಅಧಿವೇಶನದಲ್ಲಿ ಸಮಾಜ ಬಾಂಧವರೆಲ್ಲರೂ ಸೇರಿ ಅಧಿವೇಶನಕ್ಕೆ ಮುತ್ತಿಗೆ ಹಾಕಿದ್ದರು. ನಂತರ, ಬಸವಜಯ ಮೃತ್ಯುಂಜಯ ಸ್ವಾಮೀಜಿ ಬೆಂಗಳೂರವರೆಗೆ ಪಾದಯಾತ್ರೆ ನಡೆಸಿ ಫ್ರೀಡಮ್ ಪಾರ್ಕ್ನಲ್ಲಿ ಧರಣಿ ಸತ್ಯಾಗ್ರಹ ನಡೆಸಿದ್ದರು. ಬಹು ದಿನಗಳನಂತರ ಮಾಜಿ ಸಿಎಂ ಬಿಎಸ್‌ವೈ ಅವರು ಕಾಲಾವಕಾಶ ಕೇಳಿದರು.
ಆದರೆ ಈಗ ಬಿಎಸ್ ಯಡಿಯೂರಪ್ಪನವರು ಮಾಜಿ ಮುಖ್ಯಮಂತ್ರಿಗಳಲಾಗಿದ್ದಾರೆ. ಈಗ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೂಡಾ ಅಂದು ಭರವಸೆ ನೀಡಿದ್ದು, ಈಗ ಬಿಜೆಪಿ ನೇತೃತ್ವದ ಸರ್ಕಾರವಿದೆ. ಮುಖ್ಯಮಂತ್ರಿ ಮಾತ್ರ ಬದಲಾಗಿದ್ದಾರೆ. ಅವರೇ ಕೇಳಿರುವ ಕಾಲಾವಕಾಶ ಈಗ ಮುಗಿಯುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 1 ರೊಳಗಾಗಿ ಸರ್ಕಾರ, ಈ ಕುರಿತಂತೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಸರ್ಕಾರವನ್ನು ಎಚ್ಚರಿಸಿದರು.




