ಚಿಕ್ಕಮಗಳೂರು: ಕಡ್ಡಾಯವಾಗಿ ಮತದಾನ ಮಾಡುವಂತೆ ಯುವ ಜಾಗೃತಿ ಮತದಾರರ ವೇದಿಕೆ ಮನವಿ

ಚಿಕ್ಕಮಗಳೂರು: ಚುನಾವಣೆ ಬಹಿಷ್ಕಾರದ ನಿರ್ಧಾರವನ್ನು ಯಾವುದೇ ಗ್ರಾಮಸ್ಥರು ಕೈಗೊಳ್ಳಬಾರದು. ಪ್ರತಿಯೊಬ್ಬರೂ ಮತದಾನ ಮಾಡಿದಾಗ ಸಮರ್ಥರನ್ನು ಆಯ್ಕೆಯಾಗಲು ಅವಕಾಶವಾಗುತ್ತದೆ ಎಂದು ಯುವ ಜಾಗೃತ ಮತದಾರರ ವೇದಿಕೆ ಅಧ್ಯಕ್ಷ ಮಹೇಂದ್ರ ಕುಮಾರ್ ಫಲ್ಗುಣಿ ಅಭಿಪ್ರಾಯಿಸಿದ್ದಾರೆ.
ತಾಲೂಕು ಪಂಚಾಯಿತಿ, ಜಿಲ್ಲಾಪಂಚಾಯಿತಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಕೆಲವು ಗ್ರಾಮಸ್ಥರು ಮತದಾನ ಬಹಿಷ್ಕರಿಸುವುದಾಗಿ ಹೇಳಿಕೊಂಡು, ಬ್ಯಾನರ್ ಗಳ ಪ್ರದರ್ಶನ ಮಾಡಿರುವ ಬಗ್ಗೆ ವೇದಿಕೆ ಆಕ್ಷೇಪ ವ್ಯಕ್ತಪಡಿಸಿದೆ.
ಮತದಾನವೇ ಮಾಡುವುದಿಲ್ಲ ಎಂಬ ನಿರ್ಧಾರ ಸರಿಯಲ್ಲ. ಚುನಾವಣೆಗಳನ್ನು ಬಹಿಷ್ಕರಿಸುವುದರಿಂದ ಚುನಾವಣಾ ಪ್ರಕ್ರಿಯೆ ಏನೂ ನಿಂತು ಹೋಗುವುದಿಲ್ಲ. ಬದಲಿಗೆ ಸ್ಪರ್ಧಿಸುವ ಕೆಲವು ಮಂದಿಗೆ ಹಿಂಬಾಲಕರು, ಬಾಲಬುಡುಕರು ಮತದಾನ ಮಾಡುವ ಮೂಲಕ ಅನರ್ಹರು ಆಯ್ಕೆಯಾಗಲು ಅವಕಾಶವಾಗುತ್ತದೆಯಷ್ಟೇ ಎಂದಿದ್ದಾರೆ.
ಗ್ರಾಮಗಳ ಅಭಿವೃದ್ಧಿ ಕಡೆಗಣಿಸಲಾಗಿದೆ ಎಂಬ ಕಾರಣಕ್ಕೆ ಮತದಾನ ಬಹಿಷ್ಕರಿಸುವುದರಿಂದ ಪ್ರಯೋಜನವಿಲ್ಲ. ಚುನಾವಣೆಯಲ್ಲಿ ಗೆದ್ದು ಬರುವ ವ್ಯಕ್ತಿಗಳಿಗೆ ಒತ್ತಡ ಹಾಕಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿಕೊಳ್ಳಬಹುದು. ಹೀಗಾಗಿ ಯಾವುದೇ ಚುನಾವಣೆ ಬಂದರೂ ಮತದಾನ ತಿರಸ್ಕರಿಸದೆ, ಪ್ರಜಾಪ್ರಭುತ್ವದ ಮೌಲ್ಯವನ್ನು ಪ್ರತಿಯೊಬ್ಬರೂ ಉಳಿಸಬೇಕು ಎಂದು ಮಹೇಂದ್ರಕುಮಾರ್ ಮನವಿ ಮಾಡಿದ್ದಾರೆ.




