ಧಾರವಾಡದಲ್ಲಿ ಸರಣಿ ಅಪಘಾತ: ಓರ್ವ ಸ್ಥಳದಲ್ಲೇ ಸಾವು, ಮೂವರಿಗೆ ಗಾಯ

ಧಾರವಾಡ: ಕಾರು, ಲಾರಿ ಹಾಗೂ ಟ್ಯಾಂಕರ್ ನಡುವೆ ಸರಣಿ ಅಪಘಾತ ಸಂಭವಿಸಿ, ಟ್ಯಾಂಕರ್ ಚಾಲಕ ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ಧಾರವಾಡ ಹೊರವಲಯದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 4ರ ಕ್ಯಾರಕೊಪ್ಪ ಗ್ರಾಮ ಸೇತುವೆ ಮೇಲೆ ಈ ದುರ್ಘಟನೆ ನಡೆದಿದ್ದು, ಘಟನೆಯಲ್ಲಿ ಮೂವರಿಗೆ ಗಾಯಗಳಾಗಿವೆ. ಇನ್ನೂ ಮೃತ ಟ್ಯಾಂಕರ್ ಚಾಲಕ ಸೇರಿದಂತೆ ಗಾಯಾಳುಗಳ ಹೆಸರು ತಿಳಿದು ಬರಬೇಕಾಗಿದೆ. ಮೊದಲಿಗೆ ಟ್ಯಾಂಕರ್ ಹಾಗೂ ಲಾರಿಯ ನಡುವೆ ಡಿಕ್ಕಿಯಾಗಿದ್ದು, ಇದೇವೇಳೆ ಟ್ಯಾಂಕರ್ ಹಿಂಬದಿಯಿಂದ ಬಂದ ಕಾರು ಕೂಡಾ ಅಪಘಾತಕ್ಕೆ ಒಳಗಾಗಿದೆ. ಸರಣಿ ಅಪಘಾತವಾದ ಹಿನ್ನೆಲೆಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಇನ್ನೂ ಸ್ಥಳೀಯ ವಾಹನ ಸವಾರರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಹಾಗೂ ಗ್ರಾಮೀಣ ಠಾಣೆಯ ಪೊಲೀಸರು ಮೃತ ದೇಹವನ್ನು ಸ್ಥಳೀಯರ ಸಹಾಯದೊಂದಿಗೆ ಹೊರತೆಗೆದು ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ. ಬಳಿಕ ಬೆರವೊಂದು ವಾಹನ ಸಹಾಯದೊಂದಿಗೆ ಅಪಘಾತಕ್ಕೆ ಒಳಗಾದ ಎರಡು ಗೂಡ್ಸ್ ವಾಹನಗಳನ್ನು ರಸ್ತೆ ಪಕ್ಕಕ್ಕೆ ಸರೆಯಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಈ ಕುರಿತು ಧಾರವಾಡ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




