ಉತ್ತರ ಕನ್ನಡಜಿಲ್ಲಾ ಸುದ್ದಿ

ಗೋಕರ್ಣದಲ್ಲಿ ಸಂಭ್ರಮದ ನಾಗರಪಂಚಮಿ

ತೇಜಸ್ವಿ ಬಿ.ನಾಯ್ಕ

ಕಾರವಾರ : ಶ್ರಾವಣ ಮಾಸ ಬಂತೆಂದರೆ ಸಾಕು. ಸಾಲು ಸಾಲು ಹಬ್ಬಗಳು ನಮ್ಮ ಕಣ್ಣೆದುರು ಬಂದು ನಿಲ್ಲುತ್ತದೆ. ಅದರಲ್ಲೂ ಮುಖ್ಯವಾಗಿ ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯನ್ನು ಇಂದು ಸಡಗರ, ಸಂಭ್ರಮದಿಂದ ಆಸ್ತಿಕ ಭಕ್ತರು ಆಚರಿಸುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಶ್ರೀಕ್ಷೇತ್ರ ಗೋಕರ್ಣದಲ್ಲಿರುವ ಶ್ರೀ ನಾಗೇಶ್ವರ ದೇಗುಲದಲ್ಲಿ ಭಕ್ತರು ಹಬ್ಬವನ್ನು ಕೊರೋನಾ ಸೋಂಕನ್ನು ಮರೆತು ಸಡಗರ ಮತ್ತು ಸಂಭ್ರಮದಿಂದ ಆಚರಿಸಿದರು.

ಮಾತಾಪಿತರ ಶಾಪ ವಿಮೋಚನಾ ಸ್ಥಳ ಗೋಕರ್ಣದಲ್ಲಿರುವ ನಾಗೇಶ್ವರ ದೇಗುಲವೆಂಬ ಪ್ರತೀತಿ ಇದೆ.ಇಲ್ಲಿರುವ ನಾಗತೀರ್ಥದಲ್ಲಿ ಸ್ನಾನಮಾಡಿ ನಾಗೇಶ್ವರನನ್ನು ಸರ್ಪ ಸೂಕ್ತಾದಿಗಳಿಂದ ಪೂಜಿಸಿದರೆ ಮಾತಾ ಪಿತೃಗಳ ಭಾಗ್ಯ ದೊರಕುತ್ತದೆಂಬ ನಂಬಿಕೆ ಆಸ್ತಿಕ ಭಕ್ತರಲ್ಲಿದೆ. ಕಶ್ಯಪನಿಂದ ಕದ್ರುವಿನಲ್ಲಿ ಹುಟ್ಟಿದ ಮಕ್ಕಳಾದ ನಾಗಗಳು ತಾಯಿ ನೀಡಿದ ಶಾಪ ನಿವಾರಣೆಗಾಗಿ ಇಲ್ಲಿಗೆ ಬಂದು ಪರಶಿವನನ್ನು ಒಲಿಸಿದರು. ಅವರು ತಪಸ್ಸು ಮಾಡಿದ ಸ್ಥಳವೇ ಶ್ರೀ ನಾಗೇಶ್ವರ ದೇವಾಲಯ.ಅವರಿಂದ ಪ್ರತಿಷ್ಠಾಪಿತವಾದ ಭವ್ಯವಾದ ಲಿಂಗ ಈ ಸ್ಥಳದಲ್ಲಿ ಇದೆ. ದೇವಾಲಯದ ಎದುರಿನಲ್ಲಿ ಚಿಕ್ಕದಾದ ನಾಗತೀರ್ಥವೆಂಬ ಕೊಳವಿದೆ. ಕೋಟಿತೀರ್ಥದಿಂದ ಬರುವ ರಸ್ತೆಯಲ್ಲಿಯೇ ಈ ನಾಗೇಶ್ವರ ದೇವಾಲಯವಿದೆ. ಈ ಕಾರಣಕ್ಕೆ ಈ ಬೀದಿಯನ್ನು ನಾಗಬೀದಿ ಎಂದು ಕರೆಯಲಾಗುತ್ತದೆ.

ಕೇವಲ ಮಾತಾಪಿತೃಗಳ ಶಾಪ ವಿಮೋಚನೆ ಮಾತ್ರವಲ್ಲದೇ ಸರ್ಪದೋಷ ನಿವಾರಣೆ,ಸಂತತಿ ಪ್ರತಿಬಂಧಕ ದೋಷ ನಿವಾರಣೆ,ಚರ್ಮರೋಗ ನಿವಾರಣೆ ಮತ್ತು ಇನ್ನಿತರ ಆರೋಗ್ಯ ಸಮಸ್ಯೆಗಳ ನಿವಾರಣೆಗಾಗಿಯೂ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿ ಬರುವ ಭಕ್ತರು ಮೊದಲಿಗೆ ನಾಗತೀರ್ಥದಲ್ಲಿ ಸ್ನಾನಮಾಡಿ ಸರ್ಪ ಸಂಸ್ಕಾರವೆಂಬ ಧಾರ್ಮಿಕ ಕಾರ್ಯಕ್ರಮವನ್ನು ನಡೆಸುತ್ತಾರೆ. ಸರ್ಪ ಸಂಸ್ಕಾರ ನಡೆಸಿದ ವ್ಯಕ್ತಿ ಮತ್ತು ಅವರ ಕುಟುಂಬ ಮೂರು ದಿನಗಳ ಕಾಲ ಅಶೌಚ ಅಂದರೆ ಸೂತಕ ಆಚರಣೆ ಮಾಡಬೇಕಾಗುತ್ತದೆ. ನಾಲ್ಕನೆಯ ದಿನ ನಾಗ ಪ್ರತಿಷ್ಠೆ ಅಥವಾ ಆಶ್ಲೇಷ ಬಲಿ ಕರ್ಮಗಳನ್ನು ಮಾಡುವುದರಿಂದ ಸರ್ಪದೋಷ ನಿವಾರಣೆಯಾಗುತ್ತದೆ ಎಂಬ ಪ್ರತೀತಿ ಇಲ್ಲಿದೆ. ಹೀಗೆ ಸರ್ಪದೋಷದಿಂದ ಮುಕ್ತಿ ಪಡೆದವರು ಮತ್ತು ತಮ್ಮ ಸಂಕಲ್ಪಗಳನ್ನು ತನ್ಮೂಲಕ ಈಡೇರಿಸಿಕೊಂಡ ಅನೇಕ ಭಕ್ತರು ಇಲ್ಲಿಗೆ ಬಂದು ನಾಗರಪಂಚಮಿಯಂದು ಪೂಜೆ ಸಲ್ಲಿಸುವ ಪರಿಪಾಠ ಬೆಳೆದು ಬಂದಿದೆ. ಜಿಲ್ಲೆ, ರಾಜ್ಯ ಮಾತ್ರವಲ್ಲದೇ ಅನ್ಯ ರಾಜ್ಯದ ಅನೇಕ ಭಾಗಗಳಿಂದಲೂ ಭಕ್ತರು ನಾಗರಪಂಚಮಿಯಂದು ಗೋಕರ್ಣಕ್ಕೆ ಆಗಮಿಸಿ ನಾಗೇಶ್ವರನಿಗೆ ಪೂಜೆ ಸಲ್ಲಿಸುತ್ತಾರೆ.

ಒಟ್ಟಾರೆಯಾಗಿ ಇಂದಿನ ಯಾಂತ್ರಿಕ ಕಾಲದಲ್ಲೂ ಆಸ್ತಿಕರು ತಮ್ಮ ಎಷ್ಟೇ ಕೆಲಸದ ಒತ್ತಡದ ನಡುವೆಯೂ ದೂರದೂರುಗಳಿಂದ ಶ್ರೀಕ್ಷೇತ್ರಕ್ಕೆ ಆಗಮಿಸಿ ಹಲವು ವಿಧದ ಸೇವೆ ಸಲ್ಲಿಸುತ್ತಿದ್ದಾರೆ. ಮಾಸ್ಕ್ ಹಾಕಿಕೊಳ್ಳದೇ, ಸಾಮಾಜಿಕ ಅಂತರವನ್ನು ಪಾಲಿಸದೇ ಭಕ್ತರು ಹಲವು ಬಗೆಯ ಪೂಜೆಗಳನ್ನು ಸಲ್ಲಿಸುತ್ತಿರುವುದು ಗೋಕರ್ಣದಲ್ಲಿ ಕಂಡು ಬಂತು.

Spread the love

Related Articles

Leave a Reply

Your email address will not be published. Required fields are marked *

Back to top button